
ಯಾದಗಿರಿ: ದೈವದರ್ಶನ ಮುಗಿಸಿ ಮರಳುತ್ತಿದ್ದ ಕುಟುಂಬವೊಂದಕ್ಕೆ ವಿಧಿ ಅಕ್ಷರಶಃ ಮೃತ್ಯುರೂಪಿಯಾಗಿ ಅಪ್ಪಳಿಸಿದೆ. ಇಂದು ಬೆಳಿಗ್ಗೆ ಸುಮಾರು 9:45ರ ಸುಮಾರಿಗೆ ಖಾಸಗಿ ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯ ಭೀಕರತೆಗೆ ಒಂದೇ ಕುಟುಂಬದ ಆರು ಮಂದಿ ಕಾರಿನಲ್ಲೇ ಸಜೀವ ದಹನಗೊಂಡಿರುವ ಘೋರ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರಿನಿಂದ ಕಲಬುರಗಿ ಕಡೆಗೆ ವೇಗವಾಗಿ ಚಲಿಸುತ್ತಿದ್ದ ಖಾಸಗಿ ಬಸ್ ಹಾಗೂ ತಿಂಥಣಿ ಮೌನೇಶ್ವರ ವೇಣುಗೋಪಾಲ ಸ್ವಾಮಿಯ ದರ್ಶನ ಮುಗಿಸಿ ಸಿರವಾರಕ್ಕೆ ಹಿಂತಿರುಗುತ್ತಿದ್ದ ಕಾರಿನ ನಡುವೆ ಈ ಮರಣಾಂತಿಕ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ತೀವ್ರತೆ ಎಷ್ಟಿತ್ತೆಂದರೆ, ಕ್ಷಣಾರ್ಧದಲ್ಲಿ ಕಾರು ಬೆಂಕಿಯ ಉಂಡೆಯಾಗಿ ಮಾರ್ಪಟ್ಟಿದೆ. ಅಪಘಾತದ ರಭಸಕ್ಕೆ ಕಾರಿನ ಬಾಗಿಲುಗಳು ಜಾಮ್ ಆಗಿದ್ದರಿಂದ ಒಳಗಿದ್ದವರಿಗೆ ಹೊರಬರಲು ಸಾಧ್ಯವಾಗದೆ, ಕಣ್ಣೆದುರೇ ಎಲ್ಲರೂ ಬೆಂಕಿಗೆ ಆಹುತಿಯಾಗಿದ್ದಾರೆ.
ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣ ಪಂಚಾಯತ್ ಸದಸ್ಯ ಕೃಷ್ಣನಾಯಕ (52), ಅವರ ಪತ್ನಿ ಅನಂತಕಲಾ (45), ಅಳಿಯ ಶರಣಪ್ಪ (36), ಮಗಳಾದ ನಿಸರ್ಗ (30), ಶಶಿಕಲಾ (30) ಹಾಗೂ ಮೂರು ವರ್ಷದ ಹಸುಗೂಸು ಸಿದ್ದಾರ್ಥ ಈ ದುರಂತದಲ್ಲಿ ಇಹಲೋಕ ತ್ಯಜಿಸಿದ ದುರ್ದೈವಿಗಳು. ಸುಟ್ಟು ಕರಕಲಾದ ಕಾರಿನ ಅವಶೇಷಗಳ ನಡುವೆ ಪತ್ತೆಯಾದ ತಲೆಬುರುಡೆಗಳು ಹಾಗೂ ಮೃತದೇಹಗಳ ಸ್ಥಿತಿ ಸ್ಥಳೀಯರ ಎದೆಝಲ್ಲೆನಿಸುವಂತಿತ್ತು.
ಕಾರಿನಲ್ಲಿದ್ದ ಐದು ವರ್ಷದ ಅದ್ವಿಕಾ ಹಾಗೂ ಒಂದೂವರೆ ವರ್ಷದ ಹಸುಗೂಸು ಶ್ರೀನಿಧಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಗಂಭೀರ ಗಾಯಗೊಂಡಿರುವ ಇಬ್ಬರು ಮಕ್ಕಳನ್ನು ಯಾದಗಿರಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಖಾಸಗಿ ಬಸ್ಸಿನ ಮುಂಭಾಗಕ್ಕೂ ಬೆಂಕಿ ಹತ್ತಿಕೊಂಡಿತ್ತಾದರೂ, ಚಾಲಕನ ಸಮಯಪ್ರಜ್ಞೆ ಅಥವಾ ಅದೃಷ್ಟವಶಾತ್ ಬಸ್ಸಿನಲ್ಲಿದ್ದ 33 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಸುರಪುರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿ, ಕಾರನ್ನು ಕತ್ತರಿಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಅತಿವೇಗ ಅಥವಾ ಚಾಲಕನ ನಿರ್ಲಕ್ಷ್ಯ ಈ ಘಟನೆಗೆ ಕಾರಣವೇ ಎಂಬ ಬಗ್ಗೆ ತನಿಖೆ ಆರಂಭವಾಗಿದ್ದು, ಸಂತೋಷದ ಯಾತ್ರೆ ಹೀಗೆ ಸ್ಮಶಾನ ಮೌನದಲ್ಲಿ ಅಂತ್ಯವಾಗಿರುವುದು ಇಡೀ ರಾಜ್ಯವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.

