
ಹುಬ್ಬಳ್ಳಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾನು ನಿರೀಕ್ಷಿಸಿದಷ್ಟು ಅಂಕಗಳು ಬರಲಿಲ್ಲ ಎಂಬ ಕಾರಣಕ್ಕೆ ಮನನೊಂದ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ನಗರದ ಉಣಕಲ್‌ನ ಸಿದ್ಧಕಲ್ಯಾಣ ನಗರದಲ್ಲಿ ನಡೆದಿದೆ.
ಹುಬ್ಬಳ್ಳಿಯ ವಿದ್ಯಾನಗರದ ಕನಕದಾಸ ಕಾಲೇಜಿನ ವಿದ್ಯಾರ್ಥಿನಿ ಶ್ರಾವಣಿ ಮಾರುತಿ ಕಾಳೆ (18) ಮೃತಪಟ್ಟ ದುರ್ದೈವಿ. ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಶ್ರಾವಣಿ, ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಶೇ. 71 ರಷ್ಟು ಅಂಕಗಳನ್ನು ಪಡೆದಿದ್ದಳು. ಆದರೆ, ಪರೀಕ್ಷೆಯಲ್ಲಿ ನೂರಕ್ಕೆ ನೂರು ಪ್ರತಿಶತ ಅಂಕಗಳನ್ನು ಪಡೆಯಲೇಬೇಕೆಂದು ತನಗೆ ತಾನೇ ಸವಾಲು ಹಾಕಿಕೊಂಡಿದ್ದಳು ಎನ್ನಲಾಗಿದೆ. ಕಷ್ಟಪಟ್ಟು ಓದಿದ್ದರೂ ಫಲಿತಾಂಶದಲ್ಲಿ ಅಂಕಗಳು ಕಡಿಮೆಯಾದ ಹಿನ್ನೆಲೆಯಲ್ಲಿ ತೀವ್ರ ನಿರಾಸೆಗೊಂಡಿದ್ದ ಆಕೆ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಶವಾಗಾರಕ್ಕೆ ರವಾನಿಸಲಾಗಿದೆ. ಉತ್ತಮ ಅಂಕಗಳನ್ನು ಪಡೆದಿದ್ದರೂ ಸಹ, ಅತಿಯಾದ ನಿರೀಕ್ಷೆ ಮತ್ತು ಮಾನಸಿಕ ಒತ್ತಡದಿಂದಾಗಿ ಪ್ರತಿಭಾವಂತ ವಿದ್ಯಾರ್ಥಿನಿ ಹೀಗೆ ಸಾವಿನ ಹಾದಿ ಹಿಡಿದಿರುವುದು ಪೋಷಕರು ಹಾಗೂ ಸಂಬಂಧಿಕರಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

