ವಿದ್ಯಾಮಾತೆಗೆ ಇಲ್ಲದ ರಕ್ಷಣೆ: ಕರ್ತವ್ಯಕ್ಕೆ ತೆರಳುತ್ತಿದ್ದ ಶಿಕ್ಷಕಿಯ ಭೀಕರ ಕೊಲೆ, ಶವ ದಹನ!

Spread the love

ಕಲಬುರಗಿ: ಸಮಾಜಕ್ಕೆ ಜ್ಞಾನದ ಬೆಳಕು ನೀಡುವ ಶಿಕ್ಷಕರಿಗೆ ಇಂದು ರಕ್ಷಣೆಯೇ ಇಲ್ಲದಂತಾಗಿದೆಯೇ? ‘ಗುರು ಸಾಕ್ಷಾತ್ ಪರಬ್ರಹ್ಮ’ ಎಂದು ಪೂಜಿಸುವ ನಾಡಿನಲ್ಲಿ, ಜ್ಞಾನದೀವಿಗೆ ಹಚ್ಚುವ ಗುರುವೊಬ್ಬರು ದುಷ್ಕರ್ಮಿಗಳ ಪೈಶಾಚಿಕ ಕೃತ್ಯಕ್ಕೆ ಬಲಿಯಾಗಿರುವುದು ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕಲ್ಕುಡ ಗ್ರಾಮದ ಬಳಿ ಶಿಕ್ಷಕಿಯೊಬ್ಬರನ್ನು ಅತಿ ಕ್ರೂರವಾಗಿ ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಲು ಶವ ಸುಟ್ಟು ಹಾಕಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ.

ಘಟನೆಯ ವಿವರ:

ಕಲಬುರಗಿ ನಗರದ ಆನಂದ್ ಕಾಲೋನಿ ನಿವಾಸಿಯಾದ ಜ್ಯೋತಿ ಕಪಾಳೆ ಹಿರೇಮಠ (57) ಕೊಲೆಯಾದ ದುರ್ದೈವಿ. ಇವರು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವಂದರಖೇಡ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ವಾರಕ್ಕೊಮ್ಮೆ ಕಲಬುರಗಿಯ ತಮ್ಮ ನಿವಾಸಕ್ಕೆ ಬಂದು ಹೋಗುತ್ತಿದ್ದ ಜ್ಯೋತಿ ಅವರು, ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಲು ಕಲಬುರಗಿಯಿಂದ ಬೀದರ್‌ಗೆ ತೆರಳುತ್ತಿದ್ದರು. ಈ ಮಾರ್ಗಮಧ್ಯೆ ಕಮಲಾಪುರ ಸಮೀಪದ ಕಲ್ಮಡ ಗ್ರಾಮದ ಬಳಿ ದುಷ್ಕರ್ಮಿಗಳು ಅವರನ್ನು ತಡೆದು, ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಅಷ್ಟಕ್ಕೇ ನಿಲ್ಲದ ಹಂತಕರು, ಗುರುತೇ ಸಿಗದಂತೆ ರಸ್ತೆ ಬದಿಯಲ್ಲಿ ಪೆಟ್ರೋಲ್ ಸುರಿದು ಶವವನ್ನು ಸುಟ್ಟುಹಾಕಿ ವಿಕೃತಿ ಮೆರೆದಿದ್ದಾರೆ.

ತನಿಖೆ ಚುರುಕು:

ಆರಂಭದಲ್ಲಿ ಇದೊಂದು ಅಪರಿಚಿತ ಶವದ ಪ್ರಕರಣವೆಂದು ದಾಖಲಿಸಿಕೊಂಡಿದ್ದ ಕಮಲಾಪುರ ಪೊಲೀಸರು, ತನಿಖೆಯನ್ನು ತೀವ್ರಗೊಳಿಸಿದಾಗ ಮೃತರ ಗುರುತು ಪತ್ತೆಯಾಗಿದೆ. ಸದ್ಯ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಂತಕರ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ.

ಸಮಾಜ ಎತ್ತ ಸಾಗುತ್ತಿದೆ?

ಮಕ್ಕಳಿಗೆ ಅಕ್ಷರ ಕಲಿಸಿ ಬದುಕು ರೂಪಿಸುವ ಶಿಕ್ಷಕಿಯೊಬ್ಬರಿಗೆ ಇಂತಹ ದುರ್ಗತಿ ಬಂದಿರುವುದು ಆತಂಕಕಾರಿ ವಿಷಯ. ಸಮಾಜದಲ್ಲಿ ಶಿಕ್ಷಕರಿಗೆ ನೀಡಬೇಕಾದ ಗೌರವ ಮಾತುಗಳಿಗಷ್ಟೇ ಸೀಮಿತವಾಗಿದೆಯೇ ಎಂಬ ಪ್ರಶ್ನೆ ಮೂಡುತ್ತಿದೆ. ಹಗಲು ಹೊತ್ತಿನಲ್ಲೇ ಸಂಚರಿಸುವ ಮಹಿಳಾ ಶಿಕ್ಷಕರಿಗೆ ಸುರಕ್ಷತೆ ಇಲ್ಲದಿದ್ದರೆ ಸಾಮಾನ್ಯರ ಗತಿಯೇನು? ವೃತ್ತಿ ನಿಷ್ಠೆಯಿಂದ ಕರ್ತವ್ಯಕ್ಕೆ ಹೋಗುತ್ತಿದ್ದ ಜೀವಾತ್ಮವೊಂದನ್ನು ಹೀಗೆ ಬಲಿಪಡೆದ ಕ್ರೂರಿಗಳಿಗೆ ಕಠಿಣ ಶಿಕ್ಷೆಯಾಗಲಿ ಎನ್ನುವುದೇ ಸಾರ್ವಜನಿಕರ ಆಗ್ರಹವಾಗಿದೆ.

Leave a Reply

Your email address will not be published. Required fields are marked *