ಸಂಧಾನಪಾಳ್ಯದಲ್ಲಿ ರೈತ ಸಂಘದ ಮಹಿಳಾ ಗ್ರಾಮ ಘಟಕ ಉದ್ಘಾಟನೆ

Spread the love

*ಹನೂರು* : ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಧಾನಪಾಳ್ಯ ಗ್ರಾಮದಲ್ಲಿ ಮೂಲ ಸಿದ್ಧಾಂತದ ಅಡಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೂತನ ಮಹಿಳಾ ಗ್ರಾಮ ಘಟಕವನ್ನು ಉದ್ಘಾಟಿಸಲಾಯಿತು.

 

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ನೂತನ ಮಹಿಳಾ ಹಾಗೂ ಗ್ರಾಮ ಘಟಕದ ಪದಾಧಿಕಾರಿಗಳಿಗೆ ಹಸಿರು ಶಾಲು ಹೊದಿಸಿ, ಅಧಿಕೃತವಾಗಿ ಸಂಘಟನೆಗೆ ಸೇರ್ಪಡೆಗೊಳಿಸಿ ಅಭಿನಂದಿಸಲಾಯಿತು.

ಮಹಿಳೆಯರ ಪಾತ್ರ ಮಹತ್ವದ್ದು

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಗೌಡೇಗೌಡ, ರೈತ ಸಂಘಟನೆಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮನೆ ನಿರ್ವಹಣೆಯಿಂದ ಹಿಡಿದು ಹೊಲ-ಗದ್ದೆಗಳಲ್ಲಿ ಬೆವರು ಹರಿಸಿ ದುಡಿಯುವ ಮಹಿಳೆಯರಿಗೆ ಸಂಘಟನೆಯಲ್ಲಿ ಸೂಕ್ತ ಸ್ಥಾನಮಾನ ನೀಡುವುದು ನಮ್ಮ ಮೂಲ ಸಿದ್ಧಾಂತದ ಆಶಯವಾಗಿದೆ. ಸಂಧಾನಪಾಳ್ಯದಲ್ಲಿ ಮಹಿಳಾ ಘಟಕ ರಚನೆಯಾಗಿರುವುದು ಇಡೀ ಚಾಮರಾಜನಗರ ಜಿಲ್ಲೆಗೆ ಮಾದರಿಯಾಗಿದೆ ಎಂದು ಹೇಳಿದರು.

 

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಮ್ಜದ್ ಖಾನ್ ಮಾತನಾಡಿ, ಮಹಿಳೆಯರು ಒಗ್ಗಟ್ಟಾಗಿ ಹೋರಾಟಕ್ಕೆ ಇಳಿದರೆ ಯಾವುದೇ ಹಕ್ಕುಗಳನ್ನು ಪಡೆಯಬಹುದು. ಕಾಡಂಚಿನ ಮಾರ್ಟಳ್ಳಿ ವ್ಯಾಪ್ತಿಯಲ್ಲಿ ವನ್ಯಜೀವಿ ಹಾವಳಿ, ಕುಡಿಯುವ ನೀರು, ರಸ್ತೆ ಹಾಗೂ ಆರೋಗ್ಯ ಸೌಲಭ್ಯಗಳ ಕೊರತೆ ಹೆಚ್ಚಾಗಿದೆ. ಈ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲು ನೂತನ ಮಹಿಳಾ ಘಟಕ ಮುಂಚೂಣಿಯಲ್ಲಿ ಕೆಲಸ ಮಾಡಲಿದೆ ಎಂದು ತಿಳಿಸಿದರು.

ನೂತನ ಪದಾಧಿಕಾರಿಗಳು

ಮಹಿಳಾ ಘಟಕದ ಅಧ್ಯಕ್ಷರಾಗಿ ಪಿಂಕಿ ಬಾಯಿ, ಉಪಾಧ್ಯಕ್ಷರಾಗಿ ಲಕ್ಷ್ಮೀಬಾಯಿ, ಕಾರ್ಯದರ್ಶಿಯಾಗಿ ಜಾನೆಟ್ ಸೋನಿಯಾ ಆಯ್ಕೆಯಾದರು. ಗ್ರಾಮ ಘಟಕದ ಅಧ್ಯಕ್ಷರಾಗಿ ಅಂತೋನಿಸ್ವಾಮಿ, ಉಪಾಧ್ಯಕ್ಷರಾಗಿ ಕಮಲನಾಥನ್, ಕಾರ್ಯದರ್ಶಿಯಾಗಿ ಚಂದ್ರು ಹಾಗೂ ಖಜಾಂಚಿಯಾಗಿ ರಮೇಶ್ ಆಯ್ಕೆಯಾಗಿದ್ದಾರೆ. ಇದೇ ಸಂದರ್ಭದಲ್ಲಿ 40ಕ್ಕೂ ಹೆಚ್ಚು ಮಂದಿ ಸಂಘಟನೆಗೆ ಸೇರ್ಪಡೆಗೊಂಡರು.

 

ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ರವಿ ನಾಯ್ಡು, ಖಾಯಂ ಸದಸ್ಯ ನಾಗರಾಜು, ಪ್ರಧಾನ ಕಾರ್ಯದರ್ಶಿ ಮಹಾದೇವ ಪ್ರಸಾದ್, ಜಿಲ್ಲಾ ಮಹಿಳಾ ಅಧ್ಯಕ್ಷೆ ರಾಜಮಣಿ, ತಾಲೂಕು ಅಧ್ಯಕ್ಷೆ ಮುತ್ತುಲಕ್ಷ್ಮಿ, ಉಪಾಧ್ಯಕ್ಷೆ ಶಾಂತಿ, ಕೊಳ್ಳೇಗಾಲ ತಾಲೂಕು ಅಧ್ಯಕ್ಷ ನಟೇಶ್, ಉಪಾಧ್ಯಕ್ಷ ರಾಜಣ್ಣ, ಹನೂರು ತಾಲೂಕು ಗೌರವಾಧ್ಯಕ್ಷ ಚಿನ್ನಸ್ವಾಮಿ, ಅಧ್ಯಕ್ಷ ರಾಜಣ್ಣ, ಉಪಾಧ್ಯಕ್ಷ ಕಾಶಿ ಗೌಡ, ಕಾರ್ಯದರ್ಶಿ ವೆಂಕಟಾಚಲ, ಸಹ ಕಾರ್ಯದರ್ಶಿ ಸುನೀಲ್, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ದಿಲೀಪ್, ಪ್ರಧಾನ ಕಾರ್ಯದರ್ಶಿ ಲೋಕೇಶ್ ಸೇರಿದಂತೆ ಗ್ರಾಮದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬಾಕ್ಸ್ :ಮಹಿಳೆಯರಿಗೆ ಸಂಘಟನಾತ್ಮಕ ವೇದಿಕೆ

ಗ್ರಾಮೀಣ ಮಹಿಳೆಯರು ಕೇವಲ ಗೃಹಕೃತ್ಯಕ್ಕೆ ಸೀಮಿತವಾಗದೆ ಕೃಷಿಯಲ್ಲೂ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸಂಧಾನಪಾಳ್ಯದಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಘಟಕ ರಚಿಸಿರುವುದು ಮಹಿಳಾ ರೈತರು ಹಾಗೂ ಕೂಲಿ ಕಾರ್ಮಿಕ ಮಹಿಳೆಯರು ಎದುರಿಸುತ್ತಿರುವ ಕೂಲಿ ತಾರತಮ್ಯ, ಶೋಷಣೆ ಮತ್ತು ಸ್ಥಳೀಯ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಲು ಬಲವಾದ ವೇದಿಕೆ ಕಲ್ಪಿಸಿದಂತಾಗಿದೆ.

ವರದಿ :ಕಾರ್ತಿಕ್ ಗೌಡ ಹನೂರು 

Leave a Reply

Your email address will not be published. Required fields are marked *