ಹನೂರು : ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದರೂ, ವಿಧಾನಸಭೆಯಲ್ಲಿ ಬರದ ಕುರಿತು ವಿಶೇಷ ಚರ್ಚೆ ನಡೆದ ಸಂದರ್ಭದಲ್ಲಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಶಾಸಕರು ಧ್ವನಿ ಎತ್ತದೆ ಮೌನ ವಹಿಸಿರುವುದು ಖಂಡನೀಯ ಎಂದು ಬಿಜೆಪಿ ಯುವ ಮುಖಂಡ ನಿಶಾಂತ್ ಆರೋಪಿಸಿದರು.
ಹನೂರು ಪಟ್ಟಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ 53 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಜಾನುವಾರುಗಳಿಗೆ ಮೇವಿನ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ವಿಧಾನಸಭೆಯ ಬರ ಅಧಿವೇಶನದಲ್ಲಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಶಾಸಕರು ಮಾತನಾಡಬೇಕಿತ್ತು. ಆದರೆ ಒಂದು ದಿನವೂ ಧ್ವನಿ ಎತ್ತದೆ ಮೌನ ವಹಿಸಿರುವುದು ಹನೂರು ಜನತೆಗೆ ಮಾಡಿದ ದ್ರೋಹವಾಗಿದೆ ಎಂದು ಟೀಕಿಸಿದರು.
ಹನೂರು ಕ್ಷೇತ್ರದ ಜನರೆಲ್ಲರೂ ರೈತಾಪಿ ವರ್ಗದವರು ಎಂದು ಪ್ರತಿ ಭಾಷಣದಲ್ಲೂ ಹೇಳುವ ಶಾಸಕರಿಗೆ, ಬರ ಪರಿಸ್ಥಿತಿಯ ಸಂದರ್ಭದಲ್ಲಿ ಕ್ಷೇತ್ರದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಇದಕ್ಕಿಂತ ಉತ್ತಮ ಅವಕಾಶ ಮತ್ತೊಂದಿರಲಿಲ್ಲ. ಇತರ ಕ್ಷೇತ್ರಗಳ ಶಾಸಕರು ತಮ್ಮ ಕ್ಷೇತ್ರಗಳಿಗೆ ಅಗತ್ಯ ನೆರವು ಹಾಗೂ ಪರಿಹಾರಗಳನ್ನು ಕೇಳಿದ್ದಾರೆ. ಆದರೆ ಹನೂರು ಶಾಸಕರು ಮೌನ ವಹಿಸಿದ್ದಾರೆ ಎಂದು ನಿಶಾಂತ್ ಆರೋಪಿಸಿದರು.
ತಾಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಸಮಸ್ಯೆ ಇರುವ ಗ್ರಾಮಗಳಿಗೆ ನಾಲ್ಕು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಈ ಪರಿಸ್ಥಿತಿ ಮುಂದಿನ ಆರು ತಿಂಗಳವರೆಗೂ ಮುಂದುವರಿಯುವ ಸಾಧ್ಯತೆ ಇದೆ. ರೈತರು ಬೆಳ್ಳುಳ್ಳಿ ಬೆಳೆಗೆ ಟ್ಯಾಂಕರ್ ಮೂಲಕ ನೀರು ಹಾಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ವಿಧಾನಸಭೆಯಲ್ಲಿ ಮಾತನಾಡದಿದ್ದರೆ ಅಧಿವೇಶನಕ್ಕೆ ಹೋಗುವುದಾದರೂ ಏಕೆ ಎಂದು ಅವರು ಪ್ರಶ್ನಿಸಿದರು.
ಬೆಳೆ ವಿಮೆ ಮಾಡಿಸುವಲ್ಲೂ ಸರ್ಕಾರ ವಿಫಲ: ಈ ಬಾರಿ ಶೇ.100ರಷ್ಟು ಬಿತ್ತನೆಯಾಗದಿದ್ದರೂ ಶೇ.50ಕ್ಕಿಂತ ಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾಗಿದೆ. ಆದರೆ ಕೇವಲ ಸುಮಾರು 3 ಸಾವಿರ ರೈತರು ಮಾತ್ರ ಬೆಳೆ ವಿಮೆ ಮಾಡಿಸಿದ್ದಾರೆ. ತೋಟಗಾರಿಕೆ ಇಲಾಖೆಯ ಮೂಲಕ ಜಿಲ್ಲೆಯಲ್ಲಿ ಸುಮಾರು 1,250 ರೈತರು ವಿಮೆ ಮಾಡಿಸಿದ್ದಾರೆ. ಒಟ್ಟಾರೆ ಶೇ.5ರಷ್ಟೂ ರೈತರಿಗೆ ಬೆಳೆ ವಿಮೆ ಮಾಡಿಸಲು ಸಾಧ್ಯವಾಗಿಲ್ಲ. ಕನಿಷ್ಠ ರೈತರಿಗೆ ಅರಿವು ಮೂಡಿಸಿ ವಿಮೆ ಮಾಡಿಸುವಲ್ಲಿಯೂ ಸರ್ಕಾರ ಹಾಗೂ ಶಾಸಕರು ವಿಫಲರಾಗಿದ್ದಾರೆ. ಬರ ನಿರ್ವಹಣೆಯಲ್ಲಿ ಸರ್ಕಾರ ಶೂನ್ಯ ಅಂಕ ಪಡೆದಿದೆ ಎಂದು ನಿಶಾಂತ್ ಟೀಕಿಸಿದರು.
ಜೆಜೆಎಂ ಯೋಜನೆ ಅನುಷ್ಠಾನಕ್ಕೆ ವಿಳಂಬ: ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆ ಅನುಷ್ಠಾನಗೊಂಡು ಮೂರೂವರೆ ವರ್ಷ ಕಳೆದರೂ ಕ್ಷೇತ್ರದಲ್ಲಿ ಸಮರ್ಪಕವಾಗಿ ಜಾರಿಗೆ ತರಲು ಸಾಧ್ಯವಾಗಿಲ್ಲ. ಕುಡಿಯುವ ನೀರಿನ ಯೋಜನೆಗೆ ಅಗತ್ಯ ಅನುಮತಿಗಳನ್ನು ಪಡೆಯಲು ಶಾಸಕರಿಗೆ ಸಾಧ್ಯವಾಗುತ್ತಿಲ್ಲ. ಆದರೆ ಇತರೆ ಯೋಜನೆಗಳಿಗೆ ಅನುಮತಿ ದೊರೆಯುತ್ತಿದೆ ಎಂದು ಪ್ರಶ್ನಿಸಿದ ಅವರು, ಇದು ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.
ಅಜ್ಜೀಪುರ ಡ್ಯಾಂನಲ್ಲಿದ್ದ ನೀರನ್ನು ಅಧಿಕಾರಿಗಳು ಬೇರೆಡೆಗೆ ಹರಿಸಿದ್ದಾರೆ. ಈ ಕುರಿತು ಕಿಸಾನ್ ಸಂಘದವರು ಜಿಲ್ಲಾಧಿಕಾರಿಗಳ ಸಭೆಯಲ್ಲಿ ಪ್ರಶ್ನಿಸಿದಾಗ, ಶಾಸಕರು ಸೂಚಿಸಿದ್ದರಿಂದ ನೀರು ಬಿಡಲಾಗಿದೆ ಎಂದು ಅಧಿಕಾರಿಗಳೇ ತಿಳಿಸಿದ್ದಾರೆ ಎಂಬುದು ತಮ್ಮ ಗಮನಕ್ಕೆ ಬಂದಿದೆ ಎಂದು ನಿಶಾಂತ್ ಆರೋಪಿಸಿದರು.
ರಸ್ತೆ ಕಾಮಗಾರಿಗಳೂ ಅಪೂರ್ಣ: ಹಿಂದಿನ ಶಾಸಕರ ಅವಧಿಯಲ್ಲಿ ಆರಂಭವಾದ ಹಲವು ಕಾಮಗಾರಿಗಳು ಪೂರ್ಣಗೊಂಡಿದ್ದರೆ, ಹಾಲಿ ಶಾಸಕರ ಅವಧಿಯಲ್ಲಿ ಆರಂಭಿಸಿರುವ ಕಾಮಗಾರಿಗಳು ಅಪೂರ್ಣವಾಗಿಯೇ ಉಳಿದಿವೆ ಎಂದು ನಿಶಾಂತ್ ಆರೋಪಿಸಿದರು. ಚಿಕ್ಕಲೂರು ರಸ್ತೆ ಕಾಮಗಾರಿಗೆ ಭೂಮಿಪೂಜೆ ಮಾಡಿ ಎರಡು ವರ್ಷ ಕಳೆದರೂ ಕಾಮಗಾರಿ ಆರಂಭವಾಗಿಲ್ಲ. ಬಂಡಳ್ಳಿ ರಸ್ತೆ 11 ಕಿ.ಮೀ. ಕಾಮಗಾರಿಗೆ ಎರಡು ವರ್ಷ ಕಳೆದಿದ್ದು, ಇನ್ನೂ ಪೂರ್ಣಗೊಂಡಿಲ್ಲ. 11 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಎರಡು ವರ್ಷ ತೆಗೆದುಕೊಂಡಿರುವುದು ಕ್ಷೇತ್ರದ ಅಭಿವೃದ್ಧಿಯ ವೇಗವನ್ನು ತೋರಿಸುತ್ತದೆ ಎಂದು ಟೀಕಿಸಿದರು.
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮೂರು ವರ್ಷಗಳಿಂದ ಸಾಧ್ಯವಾಗದವರು ಮುಂದಿನ ಒಂದೂವರೆ ವರ್ಷದಲ್ಲಿ ಏನು ಮಾಡುತ್ತಾರೆ ಎಂದು ಪ್ರಶ್ನಿಸಿದ ನಿಶಾಂತ್, ಆರ್‌ಬಿಎಸ್ ಕಚೇರಿಗೆ ತಾವೇ ತೆರಳಿ ಸಂಬಂಧಪಟ್ಟ ಕಡತದ ಸ್ಥಿತಿಯನ್ನು ಪರಿಶೀಲಿಸಿರುವುದಾಗಿ ತಿಳಿಸಿದರು. ಅಧಿಕಾರಿಗಳು ಹಾಗೂ ಸರ್ಕಾರದಿಂದ ಕೆಲಸ ಸಾಧ್ಯವಾಗದಿದ್ದರೆ ತಮ್ಮ ಪಾಡಿಗೆ ತಾವು ಹೋರಾಟ ನಡೆಸುವುದಾಗಿ ಹೇಳಿದರು.
ಸರ್ಕಾರ ಕೂಡಲೇ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು. ರೈತರಿಗೆ ಬೆಳೆ ವಿಮೆ, ಹೊಸ ಬಿತ್ತನೆಗೆ ಪರಿಹಾರ ಹಾಗೂ ಜಾನುವಾರುಗಳಿಗೆ ಅಗತ್ಯ ಮೇವು ಒದಗಿಸಲು ಗೋಶಾಲೆಗಳನ್ನು ತೆರೆಯಬೇಕು. ಇಲ್ಲವಾದಲ್ಲಿ ಬಿಜೆಪಿ ಯುವ ಮೋರ್ಚಾ ಹಾಗೂ ಕಾವೇರಿ ಸಮಿತಿಯ ನೇತೃತ್ವದಲ್ಲಿ ಹೋರಾಟ ಸಮಿತಿ ರಚಿಸಿ ಉಗ್ರ ಹೋರಾಟ ನಡೆಸಲಾಗುವುದು ಎಂದು ನಿಶಾಂತ್ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಚಂಗವಾಡಿ ರಾಜು, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಪುಟ್ಟಣ್ಣ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನಾಗರಾಜು, ರೈತ ಮುಖಂಡ ಲೂರ್ದುಸ್ವಾಮಿ, ಮುಖಂಡರಾದ ಕಾಮಗೆರೆ ಸುರೇಶ್, ಪಾಳ್ಯ ಸಿದ್ದಪ್ಪಾಜಿ ನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ :ಕಾರ್ತಿಕ್ ಗೌಡ ಹನೂರು
ಬರ ಅಧಿವೇಶನದಲ್ಲಿ ಹನೂರು ಶಾಸಕರ ಮೌನ ಖಂಡನೀಯ: ಬಿಜೆಪಿ ಯುವ ಮುಖಂಡ ನಿಶಾಂತ್

