
ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲು ಸೇರಿರುವ ಧಾರವಾಡ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಮತ್ತೊಂದು ದೊಡ್ಡ ಶಾಕ್ ಎದುರಾಗಿದೆ. ಕರ್ನಾಟಕ ವಿಧಾನಸಭೆ ಸಚಿವಾಲಯವು ಶಾಸಕ ವಿನಯ್ ಕುಲಕರ್ಣಿಯವರ ಸದಸ್ಯತ್ವವನ್ನು ರದ್ದುಪಡಿಸಿ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಬೆಂಗಳೂರು ನಗರದ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರ ನ್ಯಾಯಾಲಯ (CCH-82) ವಿಶೇಷ ಸಿಸಿ ಸಂಖ್ಯೆ 565/2021ರಲ್ಲಿ ವಿನಯ್ ಕುಲಕರ್ಣಿ ವಿರುದ್ಧ ದೋಷಾರೋಪಣೆ ಸಾಬೀತಾಗಿದೆ. ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ ಹಿನ್ನೆಲೆ, ಪ್ರಜಾಪ್ರತಿನಿಧಿ ಕಾಯ್ದೆಯ ಪ್ರಕಾರ ಅವರು ಶಾಸಕರಾಗಿ ಮುಂದುವರಿಯಲು ಅನರ್ಹರಾಗಿದ್ದಾರೆ.
ಏಪ್ರಿಲ್ 15ರಿಂದಲೇ ಅನರ್ಹತೆ ಜಾರಿ
ರಾಜ್ಯ ವಿಧಾನಸಭೆ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯಲ್ಲಿ, ಧಾರವಾಡ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಶಾಸಕ ವಿನಯ್ ಕುಲಕರ್ಣಿ ಅವರು ಶಿಕ್ಷೆಗೆ ಗುರಿಯಾದ ದಿನಾಂಕವಾದ 2026ರ ಏಪ್ರಿಲ್ 15ರಿಂದಲೇ ಕರ್ನಾಟಕ ವಿಧಾನಸಭೆಯ ಸದಸ್ಯತ್ವದಿಂದ ಅನರ್ಹರಾಗಿದ್ದಾರೆ ಎಂದು ಸ್ಪಷ್ಟಪಡಿಸಲಾಗಿದೆ.
ಅಧಿಸೂಚನೆಯಲ್ಲಿ, ಭಾರತ ಸಂವಿಧಾನದ 191(1)(e) ವಿಧಿ ಹಾಗೂ ಜನತಾ ಪ್ರಾತಿನಿಧ್ಯ ಕಾಯ್ದೆ, 1951ರ ಸೆಕ್ಷನ್ 8ರ ನಿಯಮಾವಳಿಗಳ ಪ್ರಕಾರ ಅನರ್ಹತೆ ಜಾರಿಯಾಗುತ್ತದೆ ಎಂದು ಉಲ್ಲೇಖಿಸಲಾಗಿದೆ. ಇದರೊಂದಿಗೆ ಧಾರವಾಡ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಸ್ಥಾನ ಖಾಲಿಯಾಗಿದೆ ಎಂದು ತಿಳಿಸಲಾಗಿದೆ.
ಬಿಡುಗಡೆ ಬಳಿಕವೂ ಆರು ವರ್ಷ ಅನರ್ಹತೆ ಮುಂದುವರಿಕೆ
ಕಾನೂನು ಪ್ರಕಾರ, ಎರಡು ವರ್ಷಕ್ಕಿಂತ ಹೆಚ್ಚು ಅವಧಿಯ ಜೈಲು ಶಿಕ್ಷೆಗೆ ಗುರಿಯಾದ ಜನಪ್ರತಿನಿಧಿಗಳು ತಕ್ಷಣವೇ ಅನರ್ಹರಾಗುತ್ತಾರೆ. ಶಿಕ್ಷೆ ಪೂರ್ಣಗೊಂಡು ಬಿಡುಗಡೆಯಾದ ನಂತರವೂ ಆರು ವರ್ಷಗಳವರೆಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇರುವುದಿಲ್ಲ. ಆದರೆ ಮೇಲ್ಮನವಿ ನ್ಯಾಯಾಲಯ ಶಿಕ್ಷೆಯನ್ನು ಸ್ಥಗಿತಗೊಳಿಸಿದಲ್ಲಿ ಮಾತ್ರ ಅನರ್ಹತೆ ತಾತ್ಕಾಲಿಕವಾಗಿ ನಿಲ್ಲುವ ಸಾಧ್ಯತೆ ಇದೆ.
ಏನಿದು ಪ್ರಜಾಪ್ರತಿನಿಧಿ ಕಾಯ್ದೆ?
ಭಾರತದಲ್ಲಿ ಜನಪ್ರತಿನಿಧಿಗಳ ಅನರ್ಹತೆ ಕುರಿತ ನಿಯಮಗಳನ್ನು ಪ್ರಜಾಪ್ರತಿನಿಧಿ ಕಾಯ್ದೆ, 1951 (Representation of the People Act, 1951) ಯ ಸೆಕ್ಷನ್ 8ರಲ್ಲಿ ವಿವರಿಸಲಾಗಿದೆ.
ಸೆಕ್ಷನ್ 8(3) ಏನು ಹೇಳುತ್ತದೆ?
ಯಾವುದೇ ಅಪರಾಧ ಪ್ರಕರಣದಲ್ಲಿ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯ ಜೈಲು ಶಿಕ್ಷೆ ವಿಧಿಸಿದಲ್ಲಿ, ಆ ವ್ಯಕ್ತಿ ಶಿಕ್ಷೆಯಾದ ದಿನಾಂಕದಿಂದಲೇ ಶಾಸಕ ಅಥವಾ ಸಂಸದ ಸ್ಥಾನಕ್ಕೆ ಅನರ್ಹನಾಗುತ್ತಾನೆ. ಈ ಅನರ್ಹತೆ ಶಿಕ್ಷೆ ಪೂರ್ಣಗೊಂಡ ಬಳಿಕವೂ ಆರು ವರ್ಷಗಳ ಕಾಲ ಮುಂದುವರಿಯುತ್ತದೆ.
ಈ ನಿಯಮ ಸಂಸದರು (MPs) ಮತ್ತು ಶಾಸಕರು (MLAs) ಇಬ್ಬರಿಗೂ ಸಮಾನವಾಗಿ ಅನ್ವಯವಾಗುತ್ತದೆ.
ಹಾಲಿ ಶಾಸಕರಿಗೆ ಇದ್ದ ಗ್ರೇಸ್ ಪೀರಿಯಡ್ ರದ್ದು
ಹಿಂದೆ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 8(4) ಪ್ರಕಾರ ಹಾಲಿ ಶಾಸಕರಿಗೆ ಮೇಲ್ಮನವಿ ಸಲ್ಲಿಸಲು ಮೂರು ತಿಂಗಳ ಅವಧಿಯ ರಿಯಾಯಿತಿ ನೀಡಲಾಗುತ್ತಿತ್ತು. ಆದರೆ 2013ರಲ್ಲಿ ಸುಪ್ರೀಂ ಕೋರ್ಟ್‌ನ ‘ಲಿಲಿ ಥಾಮಸ್ ವಿರುದ್ದ ಯೂನಿಯನ್ ಆಫ್ ಇಂಡಿಯಾ’ ಪ್ರಕರಣದ ತೀರ್ಪಿನಲ್ಲಿ ಈ ವಿಧಿಯನ್ನು ಅಸಂವೈಧಾನಿಕ ಎಂದು ಘೋಷಿಸಿ ರದ್ದುಪಡಿಸಲಾಯಿತು.
ಈ ತೀರ್ಪಿನ ಬಳಿಕ, ಶಿಕ್ಷೆ ವಿಧಿಸಿದ ಕ್ಷಣದಿಂದಲೇ ಜನಪ್ರತಿನಿಧಿಯ ಸದಸ್ಯತ್ವ ರದ್ದಾಗುವ ವ್ಯವಸ್ಥೆ ಜಾರಿಯಲ್ಲಿದೆ.
ಕಾಯ್ದೆಯಲ್ಲಿನ ಇತರೆ ಪ್ರಮುಖ ಅಂಶಗಳು
ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 8(1) ಮತ್ತು 8(2) ಅಡಿಯಲ್ಲಿ ಭ್ರಷ್ಟಾಚಾರ, ಹಿಂಸಾಚಾರ, ಲೈಂಗಿಕ ಅಪರಾಧಗಳು ಸೇರಿದಂತೆ ಗಂಭೀರ ಪ್ರಕರಣಗಳಲ್ಲಿ ಕಡಿಮೆ ಶಿಕ್ಷೆ ಅಥವಾ ದಂಡ ವಿಧಿಸಿದರೂ ಅನರ್ಹತೆ ಅನ್ವಯವಾಗುತ್ತದೆ.
ಮೇಲ್ಮನವಿ ಸಲ್ಲಿಸಿದ್ದರೂ ನ್ಯಾಯಾಲಯ ಶಿಕ್ಷೆಯನ್ನು ಸ್ಥಗಿತಗೊಳಿಸದಿದ್ದರೆ ಅನರ್ಹತೆ ಮುಂದುವರಿಯುತ್ತದೆ. ಅನರ್ಹತೆಯ ಅವಧಿ ಪೂರ್ಣಗೊಂಡ ಬಳಿಕ ಮಾತ್ರ ಮತ್ತೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ದೊರೆಯುತ್ತದೆ.
ಭಾರತ ಸಂವಿಧಾನದ ಆರ್ಟಿಕಲ್ 102 ಹಾಗೂ 191ರೊಂದಿಗೆ ಈ ಕಾನೂನು ಜೋಡಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ ಕ್ಷೇತ್ರದಲ್ಲಿ ಅಪರಾಧೀಕರಣ ತಡೆಯುವ ಉದ್ದೇಶದಿಂದ ಜಾರಿಗೆ ತರಲಾಗಿದೆ.

