ರಾಜ್ಯ ರಾಜಕೀಯ: ‘ಸಿಎಂ ಆಗುವ ಕಾಲ ಹತ್ತಿರ ಬಂದಿದೆ ಎಂದು ಹೇಳಿಲ್ಲ’: ವಿವಾದದ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ

Spread the love


ರಾಜ್ಯ ರಾಜಕೀಯ: ‘ಸಿಎಂ ಆಗುವ ಕಾಲ ಹತ್ತಿರ ಬಂದಿದೆ ಎಂದು ಹೇಳಿಲ್ಲ’: ವಿವಾದದ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ವರದಿ ತಿರುಚಿದ ಮಾಧ್ಯಮಗಳ ವಿರುದ್ಧ ಬೇಸರ; ‘ಜನರ ಸೇವೆ ಮತ್ತು ಉತ್ತಮ ಆಡಳಿತವೇ ನನ್ನ ಗುರಿ’ ಎಂದ ಉಪಮುಖ್ಯಮಂತ್ರಿ

ಬೆಂಗಳೂರು: ಮುಖ್ಯಮಂತ್ರಿ ಪಟ್ಟದ ಕುರಿತು ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ ವರದಿಗಳಿಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇದೀಗ ಸ್ಪಷ್ಟನೆ ನೀಡಿದ್ದಾರೆ. ‘ಸಿಎಂ ಆಗುವ ಕಾಲ ಹತ್ತಿರ ಬಂದಿದೆ’ ಎಂದು ತಾವು ಯಾವುದೇ ಸಂದರ್ಭದಲ್ಲಿ ಹೇಳಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ತಮ್ಮ ಹೇಳಿಕೆಗಳನ್ನು ತಿರುಚಿ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪತ್ರಿಕಾಮಾಧ್ಯಮದಲವರಿಗೆ ಮನವಿ ಮಾಡಿರುವ ಅವರು, “ಸಾರ್ವಜನಿಕ ಭೇಟಿಯ ಸಂದರ್ಭದಲ್ಲಿ ಕೆಲವರು ಕೇಳಿದ ಪ್ರಶ್ನೆಗಳಿಗೆ ನೀಡಿದ ಉತ್ತರವನ್ನು ಕೆಲವು ಮಾಧ್ಯಮಗಳು ತಿರುಚಿ ವರದಿ ಮಾಡಿ ವಿವಾದ ಸೃಷ್ಟಿಸುತ್ತಿರುವುದು ಬೇಸರ ತಂದಿದೆ” ಎಂದು ತಿಳಿಸಿದ್ದಾರೆ.

“ನನಗೆ ನನ್ನ ಗುರಿ ಗೊತ್ತಿದೆ, ನನಗೆ ಯಾವ ಆತುರವೂ ಇಲ್ಲ, ಈ ರೀತಿ ಹೇಳುವ ಅವಶ್ಯಕತೆಯೂ ಇಲ್ಲ” ಎಂದು ಹೇಳುವ ಮೂಲಕ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷೆ ಕುರಿತ ವರದಿಗಳಿಗೆ ತೆರೆ ಎಳೆದಿದ್ದಾರೆ.

ಉಪ ಮುಖ್ಯಮಂತ್ರಿಗಳು ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸುತ್ತಾ, “ನಾನು ಯಾವುದೇ ಹುದ್ದೆಗಾಗಿ ಆತುರದಲ್ಲಿಲ್ಲ. ರಾಜ್ಯದ ಜನರ ಸೇವೆ ಮತ್ತು ಬೆಂಗಳೂರು ನಾಗರಿಕರಿಗೆ ಉತ್ತಮ ಆಡಳಿತ ನೀಡುವುದೇ ನನ್ನ ಉದ್ದೇಶ” ಎಂದು ತಿಳಿಸಿದ್ದಾರೆ. ತಾವು ಸಾರ್ವಜನಿಕರ ಸೇವೆಗಾಗಿಯೇ ಹಗಲು-ರಾತ್ರಿ ಶ್ರಮಿಸುತ್ತಿರುವುದಾಗಿ ಹೇಳಿರುವ ಅವರು, “ಸತ್ಯವನ್ನು ತಿರುಚಿ, ದಾರಿ ತಪ್ಪಿಸುವ ವರದಿಗಳಿಂದ ದೂರವಿರುವಂತೆ ಮಾಧ್ಯಮ ಮಿತ್ರರಲ್ಲಿ ನನ್ನ ಮನವಿ” ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ. ಡಿಸಿಎಂ ಅವರ ಈ ಸ್ಪಷ್ಟನೆಯು ರಾಜ್ಯ ರಾಜಕೀಯ ವಲಯದಲ್ಲಿನ ಅನಗತ್ಯ ಚರ್ಚೆಗಳಿಗೆ ತಾತ್ಕಾಲಿಕ ವಿರಾಮ ನೀಡಿದೆ.


Leave a Reply

Your email address will not be published. Required fields are marked *