
ಬೆಂಗಳೂರು: ರಾಜಧಾನಿಯಲ್ಲಿ ಸುರಿದ ಅಕಾಲಿಕ ಧಾರಾಕಾರ ಮಳೆ ಭಾರಿ ದುರಂತಕ್ಕೆ ಕಾರಣವಾಗಿದ್ದು, ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಬಳಿ ಕಾಂಪೌಂಡ್ ಕುಸಿದು ಏಳು ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಮಳೆಯ ಆರ್ಭಟಕ್ಕೆ ನಗರದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಹಲವೆಡೆ ಮರಗಳು ಧರೆಗುರುಳಿ ಸಾರ್ವಜನಿಕ ಆಸ್ತಪಾಸ್ತಿಗೆ ಭಾರಿ ಹಾನಿ ಸಂಭವಿಸಿದೆ.
ಶಿವಾಜಿನಗರದ ಬೌರಿಂಗ್ ಆಸ್ಪತ್ರೆ ಸಮೀಪದ ಕಾಂಪೌಂಡ್ ಏಕಾಏಕಿ ಕುಸಿದ ಪರಿಣಾಮವಾಗಿ ಮಾಯಾ (51), ಸಾಜಿದ್ (20), ಅಜು (35), ಐದು ವರ್ಷದ ಮಗು ಪ್ರೀತಿ ಹಾಗೂ ಸಿಜಿ (47) ಸೇರಿದಂತೆ ಒಟ್ಟು ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ತಕ್ಷಣವೇ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಸ್ಥಿತಿಯನ್ನು ಪರಿಶೀಲಿಸಿದರು. ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಸಿಎಂ, ಮೃತರ ವಾರಸುದಾರರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಧನವನ್ನು ಘೋಷಿಸಿದರು.

ಇದೇ ಸಂದರ್ಭದಲ್ಲಿ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಹಳೆಯ ಗೋಡೆಗಳ ಸ್ಥಿತಿಗತಿ ಬಗ್ಗೆ ಮುನ್ನೆಚ್ಚರಿಕೆ ವಹಿಸದಿದ್ದಕ್ಕೆ ಚೀಫ್ ಎಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡರು. “ಈ ಕಾಂಪೌಂಡ್ ಯಾವಾಗ ಕಟ್ಟಿದ್ದು? ಹಳೆಯ ಗೋಡೆಗಳ ಬಗ್ಗೆ ಪರಿಶೀಲನೆ ನಡೆಸಬೇಕಲ್ಲವೇ?” ಎಂದು ಪ್ರಶ್ನಿಸಿದ ಅವರು, ನಗರದಲ್ಲಿರುವ ಇಂತಹ ಹಳೆಯ ಮತ್ತು ಶಿಥಿಲಗೊಂಡ ಗೋಡೆಗಳನ್ನು ಗುರುತಿಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬಿಬಿಎಂಪಿ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಮಾಹಿತಿಯಂತೆ, ನಗರದ ಸುಮಾರು 50ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಬೃಹತ್ ಮರಗಳು ಧರೆಗುರುಳಿವೆ. ಕೆಂಪೇಗೌಡ ರೈಲ್ವೆ ನಿಲ್ದಾಣದ ಬಳಿ ಮರ ಬಿದ್ದ ರಭಸಕ್ಕೆ ಹಲವಾರು ಕಾರುಗಳು ಜಖಂಗೊಂಡಿದ್ದು, ಸಂಚಾರ ವ್ಯವಸ್ಥೆ ವ್ಯತ್ಯಯಗೊಂಡಿದೆ. ಮಳೆ ಹಾನಿ ತಡೆಗಟ್ಟಲು ಮತ್ತು ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸಲು ಸರ್ಕಾರವು ಬಿಬಿಎಂಪಿ ಮತ್ತು ವಿಪತ್ತು ನಿರ್ವಹಣಾ ತಂಡಗಳಿಗೆ ಹೈ ಅಲರ್ಟ್ ಘೋಷಿಸಿದೆ.

