
ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಶಾಖಾಪುರ ಮುಖ್ಯರಸ್ತೆಯಲ್ಲಿ ಭಾನುವಾರ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಅತ್ತನೂರು ದಿಡ್ಡಿ ಬಸವೇಶ್ವರ ಜಾತ್ರೆ ಮುಗಿಸಿ ಮನೆಗೆ ಮರಳುತ್ತಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜಾತ್ರೆಯ ಸಂಭ್ರಮದಲ್ಲಿದ್ದ ಕುಟುಂಬವೊಂದು ದುರಂತ ಅಂತ್ಯ ಕಂಡಿರುವುದು ಇಡೀ ಗ್ರಾಮವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.
ಘಟನೆಯ ವಿವರ: ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಶಾಖಾಪುರ ಮುಖ್ಯರಸ್ತೆಯಲ್ಲಿ ಈ ದುರಂತ ನಡೆದಿದೆ. ಮೃತರನ್ನು ಬೈಕ್ ಚಾಲನೆ ಮಾಡುತ್ತಿದ್ದ ಅಂಜಿನಯ್ಯ ನಾಯಕ (37) ಮತ್ತು ಹತ್ತು ವರ್ಷದ ಬಾಲಕಿ ಅರ್ಚನಾ ಎಂದು ಗುರುತಿಸಲಾಗಿದೆ. ಅತ್ತನೂರು ದಿಡ್ಡಿ ಬಸವೇಶ್ವರ ಜಾತ್ರೆಯ ರಥೋತ್ಸವವನ್ನು ವೀಕ್ಷಿಸಿ, ಅಂಜಿನಯ್ಯ ಅವರು ಮೂವರನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಶಾಖಾಪುರದತ್ತ ತೆರಳುತ್ತಿದ್ದರು. ಈ ವೇಳೆ ಅತೀ ವೇಗವಾಗಿ ಬಂದ ಟಿಪ್ಪರ್ ಇವರು ಸಂಚರಿಸುತ್ತಿದ್ದ ಬೈಕ್‌ಗೆ ನೇರವಾಗಿ ಡಿಕ್ಕಿ ಹೊಡೆದಿದೆ.
ಛಿದ್ರಗೊಂಡ ದೇಹಗಳು:
ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆ ಮೃತರ ದೇಹಗಳು ನಜ್ಜುಗುಜ್ಜಾಗಿದ್ದು, ರಸ್ತೆಯಲ್ಲೆಲ್ಲಾ ದೇಹದ ಭಾಗಗಳು ಛಿದ್ರಗೊಂಡು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಪಘಾತದ ತೀವ್ರತೆಗೆ ಬೈಕ್ ಸಂಪೂರ್ಣ ಜಖಂಗೊಂಡಿದೆ. ಬೈಕ್‌ನಲ್ಲಿದ್ದ ಉಳಿದ ಇಬ್ಬರು ಯುವತಿಯರು ತೀವ್ರವಾಗಿ ಗಾಯಗೊಂಡಿದ್ದು, 19 ವರ್ಷದ ಶ್ವೇತಾ ಎಂಬುವವರ ಕಾಲು ಕತ್ತರಿಸಿ ಹೋಗಿದೆ. ಮತ್ತೊಬ್ಬ ಗಾಯಾಳು ಲಕ್ಷ್ಮಿ (22) ಎಂಬುವವರ ಸ್ಥಿತಿ ಕೂಡ ಚಿಂತಾಜನಕವಾಗಿದ್ದು, ಇಬ್ಬರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿನ್ನೆ ಸಂಜೆ ಸಂಭ್ರಮದಿಂದ ಜಾತ್ರೆಗೆ ಹೋದವರು ರಾತ್ರಿ ಮನೆ ಸೇರುವ ಮೊದಲೇ ಮಸಣ ಸೇರಿರುವುದು ಗ್ರಾಮಸ್ಥರ ಕಣ್ಣೀರಧಾರೆಗೆ ಕಾರಣವಾಗಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

