​ಕೋಟ್ಯಂತರ ರೂ. ಮೌಲ್ಯದ ಪಾನ್ ಮಸಾಲ, ತಂಬಾಕು ಜಪ್ತಿ

Spread the love

ಬೆಂಗಳೂರು (ಸೆ. 19): ಸೂಕ್ತ ದಾಖಲೆಗಳಿಲ್ಲದೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸುಮಾರು 1 ಕೋಟಿ ರೂ. ಮೌಲ್ಯದ ಪಾನ್ ಮಸಾಲ ಮತ್ತು ತಂಬಾಕು ಪದಾರ್ಥಗಳನ್ನು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಯಶವಂತಪುರ ರೈಲು ನಿಲ್ದಾಣದಲ್ಲಿ ಶೋಧ ಕಾರ್ಯಾಚರಣೆ ನಡೆಸಿದಾಗ ಈ ಅಕ್ರಮ ಬಯಲಾಗಿದೆ.

ಖಚಿತ ಮಾಹಿತಿ ಮೇರೆಗೆ ದಾಳಿ
ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ ಅಧಿಕಾರಿಗಳಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದೆ. ದೆಹಲಿಯಿಂದ ರೈಲು ಮಾರ್ಗದ ಮೂಲಕ ಬೆಂಗಳೂರಿಗೆ ಸಾಗಿಸಲಾಗಿದ್ದ 750ಕ್ಕೂ ಹೆಚ್ಚು ಚೀಲಗಳ ಕಮಲಾ ಪಸಂದ್, ಪಾನ್ ಮಸಾಲ, ಹನ್ಸ್, ಚೈನಿ ಫಿಲ್ಟರ್ ತಂಬಾಕು ಮತ್ತು ಶಿಖರ್ ಪಾನ್ ಮಸಾಲ ಬ್ರಾಂಡ್‌ಗಳ ಪದಾರ್ಥಗಳನ್ನು ವಶಕ್ಕೆ ಪಡೆಯಲಾಗಿದೆ.

ಜಿಎಸ್‌ಟಿ ವಂಚನೆ
ನಿಲ್ದಾಣದ ಫ್ಲಾಟ್‌ಫಾರಂ ಮತ್ತು ಸರಕು ವಾಹನಗಳಲ್ಲಿ ಸಂಗ್ರಹಿಸಿಡಲಾಗಿದ್ದ ಈ ಸರಕುಗಳಿಗೆ ಯಾವುದೇ ಸೂಕ್ತ ದಾಖಲೆಗಳು ಅಥವಾ ತೆರಿಗೆ ಬಿಲ್‌ಗಳು ಇರಲಿಲ್ಲ. ಪ್ರಾಥಮಿಕ ತನಿಖೆಯಲ್ಲಿ, ಸಾಗಾಟಗಾರರು ಜಿಎಸ್‌ಟಿ ನಿಯಮಗಳನ್ನು ಉಲ್ಲಂಘಿಸಿ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿರುವುದು ತಿಳಿದುಬಂದಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟಾಗಿದೆ.
ಇಲಾಖೆಯು ಇಂತಹ ಅಕ್ರಮ ಚಟುವಟಿಕೆಗಳ ವಿರುದ್ಧ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದೆ ಮತ್ತು ಜಿಎಸ್‌ಟಿ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳುತ್ತಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ (ಜಾರಿ ವಿಭಾಗ) ಅಪರ ಆಯುಕ್ತ ಕನಿಷ್ಕ ತಿಳಿಸಿದ್ದಾರೆ.

Leave a Reply

Your email address will not be published. Required fields are marked *