

ಕುಂದಗೋಳ: ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಸಂಕಷ್ಟಕ್ಕೆ ಒಳಗಾದ ತಾಲೂಕಿನ ಬಡ ಮತ್ತು ಸಂತ್ರಸ್ತ ಕುಟುಂಬಗಳಿಗೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಧಾರವಾಡ ವತಿಯಿಂದ ಪರಿಹಾರ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ಮಂಗಳವಾರದು ತಾ ಪಂ ಸಭಾಭವನದಲ್ಲಿ ನಡೆಯಿತು.
ಈ ಸಮಯದಲ್ಲಿ ಶಾಸಕ ಎಂ.ಆರ್. ಪಾಟೀಲ ಅವರು ಅಡುಗೆ ಪಾತ್ರೆ, ಮರದ ಸೌಟುಗಳು, ಲೋಟಗಳು, ತಟ್ಟೆಗಳು ಹೀಗೆ 14 ಬಗೆಯ ವಸ್ತುಗಳನ್ನು ಒಳಗೊಂಡ ಕಿಚನ್ ಸೆಟ್ ಗಳನ್ನು ವಿತರಿಸಿ ಮಾತನಾಡಿ.
“ಸರ್ಕಾರದ ನೆರವಿಲ್ಲದೆ, ದಾನಿಗಳಿಂದ ದೇಣಿಗೆ ಸಂಗ್ರಹಿಸಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯ ಶ್ಲಾಘನೀಯ. ಸೇವಾ ಮನೋಭಾವ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಇಂತಹ ಕಾರ್ಯಗಳು ಮಾದರಿ” ಎಂದು ಹೇಳಿದರು.
ಇದೇ ವೇಳೆ, “ನಮ್ಮ ತಾಲೂಕಿನಲ್ಲಿ ಇದು ರೆಡ್ ಕ್ರಾಸ್ ಸಂಸ್ಥೆಯ ಮೂರನೇ ಕಾರ್ಯಕ್ರಮವಾಗಿದೆ. ಹಿಂದೆ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಮತ್ತು ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಆಯೋಜಿಸುವ ಮೂಲಕ ಅರ್ಹ ಫಲಾನುಭವಿಗಳನ್ನು ಗುರುತಿಸಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ತಾಲೂಕಿನ ಜನತೆಯ ಪರವಾಗಿ ಸಂಸ್ಥೆಗೆ ಧನ್ಯವಾದ ಸಲ್ಲಿಸಿದ ಅವರು, ಮುಂದೆಯೂ ಇಂತಹ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವಂತೆ ಮನವಿ ಮಾಡಿದರು.
ನಂತರ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಧಾರವಾಡ ಜಿಲ್ಲಾ ಅಧ್ಯಕ್ಷರಾದ ಮಾಲತೇಶ ವೀರಾಪೂರ ಮಾತನಾಡಿ, “ಸಂಕಷ್ಟದಲ್ಲಿರುವವರಿಗೆ, ವಿಶೇಷವಾಗಿ ಕಡು ಬಡವರಿಗೆ ಮಾನವೀಯ ಸೇವೆ ನೀಡುವುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶ. ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ಜನರಿಗೆ ಸಾಂತ್ವನ ಹೇಳುವ ಸಣ್ಣ ಪ್ರಯತ್ನ ನಮ್ಮದು. ಶಾಸಕರ ಸಹಕಾರದಿಂದ ಅತ್ಯಂತ ಸೂಕ್ತ ಹಾಗೂ ಅರ್ಹ ಫಲಾನುಭವಿಗಳನ್ನು ಗುರುತಿಸಲು ಸಾಧ್ಯವಾಗಿದೆ” ಎಂದರು. ಅಲ್ಲದೆ, ಮುಂದೆ 30 ಕಡುಬಡವ ಫಲಾನುಭವಿಗಳಿಗೆ ವಿವಿಧ ಕಿಟಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ, ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಮಾಲತೇಶ ವೀರಾಪೂರ, ಪದಾಧಿಕಾರಿಗಳಾದ ಯಲ್ಲಪ್ಪ ಕಣಗಿನಾಳ, ಡಾ. ಉಮೇಶ ಹಳ್ಳಿಕೇರಿ, ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

