
ಹುಬ್ಬಳ್ಳಿ: ಮದುವೆಯಾದ ಮೂರೇ ತಿಂಗಳಲ್ಲಿ ಗೃಹಿಣಿ ಸಾವು, ಪತಿಯ ಮೇಲೆ ಕೊಲೆ ಆರೋಪ
ಹುಬ್ಬಳ್ಳಿ: ಮದುವೆಯಾದ ಕೇವಲ ಮೂರು ತಿಂಗಳಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ನಂದಗೋಕುಲ ಬಡಾವಣೆಯಲ್ಲಿ ನಡೆದಿದೆ. ಮೃತ ಗೃಹಿಣಿಯನ್ನು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಮಾಡಲಾಗಿದ್ದು, ಪತಿಯೇ ಕೊಲೆ ಮಾಡಿರುವ ಬಗ್ಗೆ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಶವವಾಗಿ ಪತ್ತೆಯಾದ ನವವಿವಾಹಿತೆ
ಇಂದು ಮುಂಜಾನೆ ಮನೆಯ ಮೇಲಿನ ಮಹಡಿಯ ಕೋಣೆಯಲ್ಲಿ ಗೃಹಿಣಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಈ ಬಗ್ಗೆ ಬೆಳಿಗ್ಗೆ ಪತಿ, ತವರು ಮನೆಯವರಿಗೆ ಕರೆ ಮಾಡಿ “ನಿಮ್ಮ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ” ಎಂದು ತಿಳಿಸಿದ್ದಾನೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೋಷಕರು, ಇದು ಆತ್ಮಹತ್ಯೆಯಲ್ಲ, ಇದೊಂದು ಪೂರ್ವನಿಯೋಜಿತ ಕೊಲೆ ಎಂದು ಆರೋಪಿಸಿದ್ದಾರೆ.
ಪತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ.
ಪತಿಯ ಹಿಂದಿನ ಪ್ರೇಮ ಸಂಬಂಧವೇ ಕಲಹಕ್ಕೆ ಕಾರಣ?
ಮೃತ ಮಹಿಳೆಯು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಳೆ ಇಟಗಿ ಗ್ರಾಮದವಳಾಗಿದ್ದಳು. ಕಳೆದ ಮೇ 21ರಂದು ಹುಬ್ಬಳ್ಳಿಯ ನಂದಗೋಕುಲ ಬಡಾವಣೆಯ ನಿವಾಸಿ ಶಿವಾನಂದ್ ಎಂಬಾತನೊಂದಿಗೆ ಇವರ ವಿವಾಹವಾಗಿತ್ತು. ಮದುವೆಗೆ ಮುನ್ನ ಪತಿ ಬೇರೊಬ್ಬ ಯುವತಿಯನ್ನು ಪ್ರೀತಿಸುತ್ತಿದ್ದ ವಿಷಯವನ್ನು ಮುಚ್ಚಿಟ್ಟಿದ್ದನು ಎನ್ನಲಾಗಿದೆ. ಇತ್ತೀಚೆಗೆ ಪತಿಯ ಮಾಜಿ ಗೆಳತಿ ಇನ್‌ಸ್ಟಾಗ್ರಾಮ್ ಮೂಲಕ ವಿವಾಹಿತೆಗೆ ಈ ವಿಷಯ ತಿಳಿಸಿ, ಕೆಲವು ಫೋಟೋಗಳನ್ನು ಸಹ ಕಳುಹಿಸಿದ್ದಳು.
ಈ ವಿಷಯ ತಿಳಿದ ನಂತರವೂ ಸಂಸಾರ ಉಳಿಸಿಕೊಳ್ಳಲು ಮುಂದಾಗಿದ್ದ ಮಹಿಳೆಗೆ ಪತಿಯು ಮಾನಸಿಕ ಹಿಂಸೆ ನೀಡುತ್ತಿದ್ದನು. ಪೋಷಕರೊಂದಿಗೆ ಮಾತನಾಡಲು ಸಹ ಬಿಡುತ್ತಿರಲಿಲ್ಲ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಕಳೆದ ರಾತ್ರಿ ಸಹ ಇವರಿಬ್ಬರ ನಡುವೆ ಜಗಳವಾಗಿದ್ದು, ಬೆಳಗಾಗುವುದರೊಳಗೆ ಆಕೆ ಶವವಾಗಿ ಪತ್ತೆಯಾಗಿದ್ದಾಳೆ. ಈ ಸಂಬಂಧ ಪೊಲೀಸರು ಪತಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

