
ನವದೆಹಲಿ, ಜೂ.19: ದೇಶಕ್ಕೆ ಮುಂಗಾರು ಪ್ರವೇಶಿಸಿ ಎರಡು ವಾರಗಳು ಕಳೆದಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ದೇಶಾದ್ಯಂತ ಮಳೆ ಕೊರತೆ ಆತಂಕಕಾರಿ ಮಟ್ಟಕ್ಕೆ ಏರಿಕೆಯಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿರುವ ಮಾಹಿತಿಯ ಪ್ರಕಾರ, ಜೂನ್ 18ರವರೆಗೆ ದೇಶದಲ್ಲಿ ವಾಡಿಕೆಯಂತೆ 72.2 ಮಿ.ಮೀ. ಮಳೆಯಾಗಬೇಕಿದ್ದರೆ, ಕೇವಲ 42.1 ಮಿ.ಮೀ. ಮಳೆಯಷ್ಟೇ ದಾಖಲಾಗಿದ್ದು, ಒಟ್ಟಾರೆ ಮುಂಗಾರು ಕೊರತೆ ಶೇ.42ಕ್ಕೆ ತಲುಪಿದೆ.
ಜೂನ್ 4ರಂದು ದೇಶಕ್ಕೆ ಮುಂಗಾರು ಪ್ರವೇಶಿಸಿದ್ದರೂ ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಅಗತ್ಯ ಪ್ರಮಾಣದ ವಾಯುಭಾರ ಕುಸಿತ ಹಾಗೂ ಒತ್ತಡ ಪ್ರದೇಶಗಳು ನಿರ್ಮಾಣವಾಗದಿರುವುದು ಮಳೆಯ ಕೊರತೆಗೆ ಪ್ರಮುಖ ಕಾರಣವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದಕ್ಕೆ ಎಲ್‌ನಿನೋ ಪ್ರಭಾವವೂ ಸೇರಿ ಮುಂಗಾರು ಚಟುವಟಿಕೆಗಳು ನಿರೀಕ್ಷಿತ ಮಟ್ಟದಲ್ಲಿ ಚುರುಕುಗೊಳ್ಳದಿರುವುದರಿಂದ ಮುಂದಿನ ದಿನಗಳಲ್ಲಿ ಮಳೆ ಚೇತರಿಕೆ ಕಾಣುವ ಸಾಧ್ಯತೆ ಕಡಿಮೆ ಎಂದು ಇಲಾಖೆ ಆತಂಕ ವ್ಯಕ್ತಪಡಿಸಿದೆ.

ಪ್ರದೇಶವಾರು ಅಂಕಿ-ಅಂಶಗಳನ್ನು ಗಮನಿಸಿದರೆ, ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಶೇ.42ರಷ್ಟು, ದಕ್ಷಿಣ ಪರ್ಯಾಯ ದ್ವೀಪ ಪ್ರದೇಶದಲ್ಲಿ ಶೇ.22ರಷ್ಟು ಹಾಗೂ ವಾಯವ್ಯ ಭಾರತದಲ್ಲಿ ಶೇ.6ರಷ್ಟು ಮಳೆ ಕೊರತೆ ದಾಖಲಾಗಿದೆ. ಮಧ್ಯ ಭಾರತದಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದ್ದು, ಶೇ.67ರಷ್ಟು ಮಳೆ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ.
ಈ ಹಿಂದೆ ಕೂಡ ಎಲ್‌ನಿನೋ ಪರಿಣಾಮದಿಂದ ದೇಶದಲ್ಲಿ ಈ ವರ್ಷ ವಾಡಿಕೆಯ ಮಳೆಯ ಶೇ.90ರಷ್ಟು ಮಾತ್ರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಇದೀಗ ಮುಂಗಾರು ಆರಂಭಿಕ ಹಂತದಲ್ಲೇ ಭಾರೀ ಕೊರತೆ ಕಂಡುಬಂದಿರುವುದು ರೈತರು, ಕೃಷಿ ವಲಯ ಹಾಗೂ ಜಲಾಶಯಗಳ ನಿರ್ವಹಣೆಯ ದೃಷ್ಟಿಯಿಂದ ಕಳವಳಕಾರಿ ಬೆಳವಣಿಗೆಯಾಗಿದೆ.
ಮುಂಗಾರು ಮಳೆಯ ಮೇಲೆ ಅವಲಂಬಿತವಾಗಿರುವ ಕೃಷಿ ಚಟುವಟಿಕೆಗಳಿಗೆ ಇದು ಸವಾಲಾಗಿ ಪರಿಣಮಿಸಿದ್ದು, ಮುಂದಿನ ಕೆಲ ವಾರಗಳಲ್ಲಿ ಮಳೆಯ ಚಟುವಟಿಕೆಗಳಲ್ಲಿ ಗಣನೀಯ ಏರಿಕೆ ಕಂಡುಬರದಿದ್ದರೆ ಹಲವು ರಾಜ್ಯಗಳಲ್ಲಿ ಬರದ ಆತಂಕ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

