ಬಿಡದಿ ಟೌನ್‌ಶಿಪ್‌ಗೆ ರೈತರ ತೀವ್ರ ವಿರೋಧ: ಜೆಎಂಸಿ ಸರ್ವೆ ವೇಳೆ ಅಧಿಕಾರಿಗಳ ಮೇಲೆ ಪೊರಕೆಯಿಂದ ಹಲ್ಲೆ, ಬೈರಮಂಗಲದಲ್ಲಿ ಉದ್ವಿಗ್ನ ಪರಿಸ್ಥಿತಿ

Spread the love

ರಾಮನಗರ, ಜು.13: ಉದ್ದೇಶಿತ ಬಿಡದಿ ಟೌನ್‌ಶಿಪ್ ನಿರ್ಮಾಣಕ್ಕೆ ವಿರೋಧವಾಗಿ ರಾಮನಗರ ಜಿಲ್ಲೆಯ ಬೈರಮಂಗಲದಲ್ಲಿ ರೈತರ ಹೋರಾಟ ಸೋಮವಾರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಜಂಟಿ ಅಳತೆ (ಜೆಎಂಸಿ) ಸರ್ವೆ ನಡೆಸಲು ಬಂದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ರೈತ ಮಹಿಳೆಯರು ಪೊರಕೆಯಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

ಬಿಡದಿ ಟೌನ್‌ಶಿಪ್ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಕರೂರು ಹಾಗೂ ಭಾರಂಗಿ ವ್ಯಾಪ್ತಿಯ ರೈತರು ಬೈರಮಂಗಲ ಸರ್ಕಲ್‌ನಲ್ಲಿ ‘ಪೊರಕೆ ಚಳುವಳಿ’ ನಡೆಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸುತ್ತಿದ್ದರು. ನೂರಾರು ರೈತ ಮಹಿಳೆಯರು ಕೈಯಲ್ಲಿ ಪೊರಕೆ ಹಿಡಿದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಇದೇ ವೇಳೆ, ಪ್ರತಿಭಟನೆ ನಡೆಯುತ್ತಿರುವ ನಡುವೆಯೇ ಬಿಡದಿಯ ಕೊಡಿಯಾಲ ವ್ಯಾಪ್ತಿಯಲ್ಲಿ ಜೆಎಂಸಿ ಸರ್ವೆ ನಡೆಸಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಬೇರೆ ಮಾರ್ಗದ ಮೂಲಕ ಸ್ಥಳಕ್ಕೆ ತೆರಳಿ ಜಂಟಿ ಅಳತೆ ಕಾರ್ಯ ಆರಂಭಿಸಲು ಮುಂದಾದರು. ಈ ವಿಷಯ ತಿಳಿಯುತ್ತಿದ್ದಂತೆಯೇ ಪ್ರತಿಭಟನಾ ನಿರತ ರೈತರು ಹಾಗೂ ಮಹಿಳೆಯರು ಸರ್ವೆ ನಡೆಯುತ್ತಿದ್ದ ಸ್ಥಳಕ್ಕೆ ಧಾವಿಸಿ ತೀವ್ರ ವಿರೋಧ ವ್ಯಕ್ತಪಡಿಸಿದರು.

ಸ್ಥಳದಲ್ಲಿದ್ದ ಅಧಿಕಾರಿಗಳು, ಪೊಲೀಸರು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದ ಸಂದರ್ಭದಲ್ಲೂ ಸರ್ವೆ ಕಾರ್ಯ ಮುಂದುವರಿದಿದೆ ಎನ್ನಲಾಗಿದೆ. ಈ ವೇಳೆ ಸರ್ವೆ ಸಿಬ್ಬಂದಿ ರೈತ ಮಹಿಳೆಯರೊಂದಿಗೆ ಅವಾಚ್ಯ ಶಬ್ದಗಳಿಂದ ವರ್ತಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದು, ಇದರಿಂದ ಆಕ್ರೋಶಗೊಂಡ ಮಹಿಳೆಯರು ಕೈಯಲ್ಲಿದ್ದ ಪೊರಕೆಯಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಏಟು ನೀಡಿದರು. ಘಟನೆಯಿಂದ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಘಟನೆಯ ಬಳಿಕ ಬೈರಮಂಗಲದಲ್ಲಿ ರೈತರು ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಚರ್ಚಿಸಿದರು. ಮಂಗಳವಾರ ಬೆಳಿಗ್ಗೆ ಮತ್ತೆ ಬೈರಮಂಗಲ ಸರ್ಕಲ್‌ನಲ್ಲಿ ಸಭೆ ಸೇರಿ ಹೋರಾಟವನ್ನು ಮುಂದುವರಿಸಲು ತೀರ್ಮಾನಿಸಿದ್ದು, ಇಂತಹ ಅಹಿತಕರ ಘಟನೆಗಳು ಮರುಕಳಿಸದಂತೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದಾಗಿ ರೈತ ಮುಖಂಡರು ತಿಳಿಸಿದ್ದಾರೆ. ಅಧಿಕಾರಿಗಳು ಮತ್ತೊಮ್ಮೆ ಸರ್ವೆಗೆ ಬಂದರೆ ಸ್ಥಳದಲ್ಲೇ ಮನವಿ ಸಲ್ಲಿಸುವ ಮೂಲಕ ವಿರೋಧ ವ್ಯಕ್ತಪಡಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಟೌನ್‌ಶಿಪ್ ಯೋಜನೆಯ ಹೆಸರಿನಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ರೈತರು ಸ್ಪಷ್ಟಪಡಿಸಿದ್ದು, ಸರ್ಕಾರ ಯೋಜನೆ ಹಿಂಪಡೆಯುವವರೆಗೆ ಹೋರಾಟ ಮುಂದುವರಿಸುವುದಾಗಿ ಘೋಷಿಸಿದ್ದಾರೆ.

Leave a Reply

Your email address will not be published. Required fields are marked *