ಕಾಡ ಅಗ್ರಹಾರ: ಕೋಟ್ಯಂತರ ರೂ. ಮೌಲ್ಯದ ಸರ್ಕಾರಿ ಜಾಗ ಪಂಚಾಯಿತಿ ವಶಕ್ಕೆ

Spread the love

ಕೆ.ಆರ್.ಪುರಂ: ನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಬಳಿಸಲು ಯತ್ನಿಸಿದ್ದ ಸುಮಾರು 18 ಕೋಟಿ ರೂ. ಮೌಲ್ಯದ ಸರ್ಕಾರಿ ಜಾಗವನ್ನು ಬಿದರಹಳ್ಳಿ ಗ್ರಾಮ ಪಂಚಾಯಿತಿ ವಶಕ್ಕೆ ಪಡೆದುಕೊಂಡಿದೆ.
ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡ ಅಗ್ರಹಾರ ಗ್ರಾಮದ ಸರ್ಕಾರಿ ಸ್ವತ್ತಿನ ಸಂಖ್ಯೆ 51/1ರಲ್ಲಿರುವ 125×170 ಅಡಿ ವಿಸ್ತೀರ್ಣದ ಜಾಗವನ್ನು ಸಂರಕ್ಷಿಸಿರುವುದಾಗಿ ಪಂಚಾಯಿತಿ ತಿಳಿಸಿದೆ.

ಈ ಕುರಿತು ಮಾಹಿತಿ ನೀಡಿದ ಪಂಚಾಯಿತಿ ಸದಸ್ಯ ಮುನಿಯಪ್ಪ, “ಹಿಂದಿನ ಇಒ ಮಂಜುನಾಥ್ ಅವರು ನಾರಾಯಣರೆಡ್ಡಿ ಎಂಬುವವರ ಹೆಸರಿಗೆ ಗ್ರಾಮ ಠಾಣಾ ಆಸ್ತಿಯ ಖಾತೆ ಮಾಡಿಕೊಡಲು ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ಗ್ರಾಮ ಪಂಚಾಯಿತಿ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ವಿವಾದದ ಕುರಿತು ಗ್ರಾಮ ಪಂಚಾಯಿತಿಯೇ ನಿರ್ಧಾರ ಕೈಗೊಳ್ಳುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಹಾಗಾಗಿ, ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ದಾಖಲೆಗಳನ್ನು ಪರಿಶೀಲಿಸಿದಾಗ, ನಾರಾಯಣರೆಡ್ಡಿ ಅವರು ಸರ್ಕಾರಿ ಆಸ್ತಿಯನ್ನು ಕಬಳಿಸಲು ಯತ್ನಿಸಿರುವುದು ದೃಢಪಟ್ಟಿದೆ” ಎಂದು ವಿವರಿಸಿದರು.

ಈ ಹಿನ್ನೆಲೆಯಲ್ಲಿ, ಸರ್ಕಾರಿ ಆಸ್ತಿಯನ್ನು ಪುನಃ ಪಂಚಾಯಿತಿ ವಶಕ್ಕೆ ಪಡೆದುಕೊಳ್ಳುವ ಮೂಲಕ ಕಾನೂನುಬದ್ಧವಾಗಿ ಸಂರಕ್ಷಣೆ ಮಾಡಲಾಗಿದೆ.

Leave a Reply

Your email address will not be published. Required fields are marked *