
ಧಾರವಾಡ: ಜಿಲ್ಲೆಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ) ಗಣೇಶ ವಿಗ್ರಹಗಳ ತಯಾರಿಕೆ, ಮಾರಾಟ, ಸಂಗ್ರಹಣೆ ಹಾಗೂ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ. ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜಿಲ್ಲಾಡಳಿತವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.
ಸಾರ್ವಜನಿಕ ಸಹಕಾರ ಅಗತ್ಯ
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿ, “ಹಬ್ಬ ಪರಿಸರ ಸ್ನೇಹಿಯಾಗಿರಬೇಕು. ಮಣ್ಣು ಮತ್ತು ನೈಸರ್ಗಿಕ ಬಣ್ಣಗಳಿಂದ ತಯಾರಿಸಿದ, ನೀರಿನಲ್ಲಿ ಸುಲಭವಾಗಿ ಕರಗುವ ಗಣೇಶ ವಿಗ್ರಹಗಳನ್ನೇ ಪೂಜಿಸಬೇಕು. ಸಾರ್ವಜನಿಕರ ಸಹಕಾರವಿಲ್ಲದೆ ಪಿಒಪಿ ವಿಗ್ರಹಗಳ ಬಳಕೆಯನ್ನು ಸಂಪೂರ್ಣವಾಗಿ ತಡೆಯುವುದು ಕಷ್ಟ” ಎಂದು ಹೇಳಿದ್ದಾರೆ.
ಜಿಲ್ಲಾಡಳಿತ ಈಗಾಗಲೇ ಹಲವೆಡೆ ಕಾರ್ಯಾಚರಣೆ ನಡೆಸಿದ್ದು, ಒಟ್ಟು 360 ಪಿಒಪಿ ವಿಗ್ರಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಗರಗ ಗ್ರಾಮದಲ್ಲಿ 184, ಅಣ್ಣಿಗೇರಿಯಲ್ಲಿ 46, ಧಾರವಾಡದ ಗಾಂಧಿ ಚೌಕ್ನಲ್ಲಿ 21, ತಲವಾಯಿ ಗ್ರಾಮದಲ್ಲಿ 10, ಸುಳ್ಳದಲ್ಲಿ 8 ಮತ್ತು ಹೆಬ್ಬಳ್ಳಿಯಲ್ಲಿ 91 ವಿಗ್ರಹಗಳು ಸೇರಿವೆ.
ಹುಬ್ಬಳ್ಳಿಯ ಬೊಮ್ಮಾಪುರ ಓಣಿಯಲ್ಲಿಯೂ ತಪಾಸಣೆ ನಡೆಸಲಾಗಿದ್ದು, ಗಣೇಶ ವಿಗ್ರಹಗಳ ಮಾದರಿಗಳನ್ನು ಸಂಗ್ರಹಿಸಿ, ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಡಿಸಿ ವಿವರಿಸಿದರು.

