11 ವರ್ಷಗಳ ನಂತರ ಕುಂದಗೋಳದಲ್ಲಿ ಎಬಿವಿಪಿ ಸಮ್ಮೇಳನ; ವಿದ್ಯಾರ್ಥಿ ಪರಿಷತ್ ಮರು ಅಸ್ತಿತ್ವ

Spread the love

ಕುಂದಗೋಳ: ಕಳೆದ ಒಂದುವರೆ ತಿಂಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ), 11 ವರ್ಷಗಳ ನಂತರ ಕುಂದಗೋಳದಲ್ಲಿ ಮತ್ತೆ ತನ್ನ ಅಸ್ತಿತ್ವವನ್ನು ಕಂಡುಕೊಂಡಿದೆ. ನಗರ ಸಮ್ಮೇಳನ ನಡೆಸುವ ಮೂಲಕ ವಿದ್ಯಾರ್ಥಿ ಪರಿಷತ್‌ ಪಟ್ಟಣದಲ್ಲಿ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ತನ್ನ ಕಾರ್ಯಚಟುವಟಿಕೆಗಳನ್ನು ಪುನರಾರಂಭಿಸಿದೆ.

2014ರಿಂದ ತೆರೆಮರೆಗೆ ಸರಿದಿದ್ದ ಎಬಿವಿಪಿ, ನಗರ ಸಮ್ಮೇಳನ ಆಯೋಜಿಸುವ ಮೂಲಕ ಯುವ ಸಮುದಾಯಕ್ಕೆ ಹೊಸ ಚೈತನ್ಯ ತುಂಬುವ ಪ್ರಯತ್ನ ಮಾಡಿದೆ.

ಸಮ್ಮೇಳನದ ವಿವರ
ನಗರ ಸಮ್ಮೇಳನದಲ್ಲಿ ಪ್ರಾಂತ ಸಂಘಟನಾ ಕಾರ್ಯದರ್ಶಿ ವೆಂಕಟೇಶ್ ಡಾಂಗೆ, ಕಮಡೊಳ್ಳಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಅಶೋಕ್ ಕಬೀರ್, ಧಾರವಾಡ ಜಿಲ್ಲಾ ಪ್ರಮುಖ ಈರಪ್ಪ ಪತ್ತಾರ್ ಹಾಗೂ ಜಿಲ್ಲಾ ಸಂಚಾಲಕ ಸಿದ್ದಾರ್ಥ್ ಕೋರಿ ಅವರು ಭಾಗವಹಿಸಿದ್ದರು.

ಸಮ್ಮೇಳನದ ಮುಖ್ಯ ಭಾಷಣ ಮಾಡಿದ ವೆಂಕಟೇಶ್ ಡಾಂಗೆ, ವಿದ್ಯಾರ್ಥಿಗಳಲ್ಲಿ ಕಡಿಮೆಯಾಗುತ್ತಿರುವ ರಾಷ್ಟ್ರೀಯತೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ರಾಷ್ಟ್ರಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಳ್ಳಬೇಕು ಎಂದು ಕರೆ ನೀಡಿದರು. ‘ಸೇರಿ ಇಂಡಿಯನ್ ಆರ್ಮಿ, ಇಲ್ಲದಿದ್ದರೆ ಸೇರಿ ಎಬಿವಿಪಿ’ ಎಂಬ ಹಿರಿಯರ ಮಾತನ್ನು ಸ್ಮರಿಸಿದರು. ಜೊತೆಗೆ, ಕೊರೋನಾ ಸಂದರ್ಭದಲ್ಲಿ ಎಬಿವಿಪಿ ದೇಶಾದ್ಯಂತ ಜನಸಾಮಾನ್ಯರಿಗೆ ಸಹಾಯ ಮಾಡಿದ ಬಗ್ಗೆ ವಿವರಿಸಿದರು.
ಯುವ ಜನಾಂಗವು ‘3ಡಿ’ (ಡ್ರಗ್ಸ್, ಡ್ರಿಂಕ್ಸ್, ಡಾನ್ಸ್) ಸಂಸ್ಕೃತಿಗೆ ದಾಸರಾಗುತ್ತಿದ್ದು, ಅದರಿಂದ ಹೊರಬರುವ ಮಾರ್ಗದ ಬಗ್ಗೆಯೂ ಅವರು ಮಾತನಾಡಿದರು. ಎಬಿವಿಪಿ ಕಾರ್ಯಕರ್ತರು ಇತರ ವಿದ್ಯಾರ್ಥಿಗಳನ್ನು ದುಶ್ಚಟಗಳಿಂದ ಮುಕ್ತಗೊಳಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

“ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಇದ್ದರೂ ಭಯವಿಲ್ಲದೆ ಅದರ ವಿರುದ್ಧ ಧ್ವನಿ ಎತ್ತಿ ಸರ್ಕಾರಕ್ಕೆ ಮನವರಿಕೆ ಮಾಡಬೇಕು. ಆಗ ಮಾತ್ರ ಸಮಸ್ಯೆಗೆ ಪರಿಹಾರ ಸಿಗುತ್ತದೆ” ಎಂದು ಕಾರ್ಯಕರ್ತರಿಗೆ ಉತ್ತೇಜನ ನೀಡಿದರು.

ನೂತನ ಪದಾಧಿಕಾರಿಗಳ ನೇಮಕ
ಕಾರ್ಯಕ್ರಮದಲ್ಲಿ ಈರಪ್ಪ ಪತ್ತಾರ್ ಅವರು ಕುಂದಗೋಳ ಶಾಖೆಯ ನೂತನ ಪದಾಧಿಕಾರಿಗಳನ್ನು ಘೋಷಿಸಿದರು. ಎಲ್.ಎಲ್. ಲಮಾಣಿ (ಹರಭಟ್ ಪಿಯು ಕಾಲೇಜು ಪ್ರಾಚಾರ್ಯರು) ಅವರನ್ನು ನಗರ ಅಧ್ಯಕ್ಷರಾಗಿ ಮತ್ತು ಕೆ.ಎಂ. ಶಿವಕುಮಾರ್ ಅವರನ್ನು ನಗರ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿವಿಧ ಕಾಲೇಜುಗಳ. ಅನೇಕ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಬಗ್ಗೆ ಸಂತಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *