​ಪ್ರಜ್ವಲ್ ವಿಡಿಯೋ ವೈರಲ್ ಕೇಸ್: ಚಾರ್ಜ್‌ಶೀಟ್‌ನಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಹೆಸರು, ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

Spread the love

ಹಾಸನ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ ಅಶ್ಲೀಲ ವಿಡಿಯೋಗಳ ಹರಡುವಿಕೆ ಪ್ರಕರಣದಲ್ಲಿ ಈಗ ಹೊಸ ತಿರುವು ಲಭಿಸಿದೆ. ಈ ವಿಡಿಯೋಗಳನ್ನು ಸಾರ್ವಜನಿಕವಾಗಿ ಹರಿಬಿಟ್ಟ ಆರೋಪದ ಮೇಲೆ ವಿಶೇಷ ತನಿಖಾ ತಂಡ (SIT) ಸುಮಾರು 13,712 ಪುಟಗಳ ಬೃಹತ್ ದೋಷಾರೋಪ ಪಟ್ಟಿಯನ್ನು ಹಾಸನದ ನ್ಯಾಯಾಲಯಕ್ಕೆ ಸಲ್ಲಿಸಿದೆ. ಇದರಲ್ಲಿ ಒಟ್ಟು 39 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿದ್ದು, ಅದರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ಹೆಸರುಗಳು ಇರುವುದು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

​ದೋಷಾರೋಪ ಪಟ್ಟಿಯ ಮಾಹಿತಿಯಂತೆ, ಪೆನ್ ಡ್ರೈವ್‌ಗಳ ಮೂಲಕ ವಿಡಿಯೋಗಳನ್ನು ಹಂಚಿಕೆ ಮಾಡಿದವರಲ್ಲಿ ಪ್ರಜ್ವಲ್ ರೇವಣ್ಣ ಅವರ ಮಾಜಿ ಚಾಲಕ ಕಾರ್ತಿಕ್, ಬಿಜೆಪಿ ಮುಖಂಡ ದೇವರಾಜೇಗೌಡ, ನವೀನ್ ಗೌಡ ಮತ್ತು ಹರೀಶ್ ಗೌಡ ಸೇರಿದಂತೆ ಹಲವರು ಸೇರಿದ್ದಾರೆ.ಎಂಬ ಶಂಕೆ ಇದೆ. ಸುಮಾರು 70ಕ್ಕೂ ಹೆಚ್ಚು ಪೆನ್ ಡ್ರೈವ್‌ಗಳನ್ನು ಬಳಸಿ ಜಿಲ್ಲೆಯಾದ್ಯಂತ ವಿಡಿಯೋಗಳನ್ನು ವ್ಯವಸ್ಥಿತವಾಗಿ ವೈರಲ್ ಮಾಡಲಾಗಿದೆ ಎಂದು ಎಸ್‌ಐಟಿ ತಿಳಿಸಿದೆ. ತನಿಖೆಯ ಭಾಗವಾಗಿ 277 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದ್ದು, ತಾಂತ್ರಿಕ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ (FSL) ವರದಿಗಳನ್ನು ಕೂಡ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

​ಈ ಹಿಂದೆ ಅತ್ಯಾಚಾರ ಪ್ರಕರಣವೊಂದರಲ್ಲಿ ಬೆಂಗಳೂರಿನ ವಿಶೇಷ ನ್ಯಾಯಾಲಯವು ಪ್ರಜ್ವಲ್ ರೇವಣ್ಣ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅದರ ಬೆನ್ನಲ್ಲೇ ಈಗ ವಿಡಿಯೋ ವೈರಲ್ ಮಾಡಿದ ಪ್ರಕರಣದಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರ ಹೆಸರುಗಳು ಹೊರಬಂದಿರುವುದು ತನಿಖೆಗೆ ಹೊಸ ವೇಗ ನೀಡಿದೆ. ಆದರೆ, ಈ ಚಾರ್ಜ್‌ಶೀಟ್‌ನಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳ ಹೆಸರುಗಳನ್ನು ಕೈಬಿಡಲಾಗಿದೆ ಎಂದು ದೂರುದಾರ ಪೂರ್ಣಚಂದ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ವಿವಾದದ ಹಿಂದೆ ದೊಡ್ಡ ತಿಮಿಂಗಿಲಗಳ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಸದ್ಯ ಈ ಪ್ರಕರಣವು ರಾಜಕೀಯ ಕೆಸರೆರಚಾಟಕ್ಕೆ ಸಾಕ್ಷಿಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಫೋಟಕ ಮಾಹಿತಿ ಹೊರಬರುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *