ಧಾರವಾಡ ಜಿಲ್ಲೆಯ ಆಯ್ದ ಗ್ರಾಮ ಪಂಚಾಯತಿಗಳಲ್ಲಿ ಹೊಸ ‘ಗ್ರಾಮ ಒನ್’ ಕೇಂದ್ರಗಳ ಸ್ಥಾಪನೆ: ಅರ್ಜಿ ಆಹ್ವಾನ

Spread the love

ಧಾರವಾಡ: ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಜನಸಂಖ್ಯೆ ಮತ್ತು ಗ್ರೇಡ್‌ಗಳ ವರ್ಗೀಕರಣದ ಆಧಾರದ ಮೇಲೆ ಹೆಚ್ಚುವರಿ ‘ಗ್ರಾಮ ಒನ್’ ಕೇಂದ್ರಗಳನ್ನು ಆರಂಭಿಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರು ಇ.ಡಿ.ಸಿ.ಎಸ್ ನಿರ್ದೇಶಕರ ಸೂಚನೆಯಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಪಂಚಾಯತಿಗಳ ವಿವರಗಳನ್ನು ನವೀಕರಿಸಿದೆ. ಈ ನವೀಕರಣದ ಅನ್ವಯ ಕೆಲವು ಗ್ರಾಮ ಪಂಚಾಯತಿಗಳು ಗ್ರೇಡ್-2 ರಿಂದ ಗ್ರೇಡ್-1 ಕ್ಕೆ ಮೇಲ್ದರ್ಜೆಗೇರಿವೆ. ಇಂತಹ ಉನ್ನತೀಕರಿಸಿದ ಹಾಗೂ ಹೊಸದಾಗಿ ಸೇರ್ಪಡೆಯಾದ ಪಂಚಾಯತಿಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಹೊಸ ಗ್ರಾಮ ಒನ್ ಕೇಂದ್ರಗಳನ್ನು ಸೃಜಿಸಲಾಗಿದೆ.

ಧಾರವಾಡ ತಾಲ್ಲೂಕಿನ ರಾಮಾಪೂರ; ಹುಬ್ಬಳ್ಳಿ ತಾಲ್ಲೂಕಿನ ಛಬ್ಬಿ, ಹೆಬಸೂರ, ಕೋಳಿವಾಡ, ಮಂಟೂರ, ರಾಯನಾಳ, ಶಿರಗುಪ್ಪಿ; ಕುಂದಗೋಳ ತಾಲ್ಲೂಕಿನ ದೇವನೂರ, ಮಳಲಿ, ಯರೇಬೂದಿಹಾಳ ಹಾಗೂ ಕಲಘಟಗಿ ತಾಲ್ಲೂಕಿನ ಗಂಜಿಗಟ್ಟಿ ಗ್ರಾಮಗಳಲ್ಲಿ ಈ ಹೊಸ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ. ಇದರೊಂದಿಗೆ ಹೊಸದಾಗಿ ರಚನೆಯಾದ ಧಾರವಾಡ ತಾಲ್ಲೂಕಿನ ಗುಳೆದಕೊಪ್ಪ ಹಾಗೂ ಕುಂದಗೋಳ ತಾಲ್ಲೂಕಿನ ಬಾರದ್ವಾಡ ಗ್ರಾಮ ಪಂಚಾಯತಿಗಳಿಗೂ ಹೊಸದಾಗಿ ಗ್ರಾಮ ಒನ್ ಕೇಂದ್ರಗಳನ್ನು ಮಂಜೂರು ಮಾಡಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಆಸಕ್ತಿಯಿರುವ ಅಭ್ಯರ್ಥಿಗಳು ಸೇವಾ ಸಿಂಧು ಅಧಿಕೃತ ವೆಬ್‌ಸೈಟ್ ಮೂಲಕ ಮಾರ್ಚ್ 15, 2026 ರೊಳಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿಗಳ ಕಚೇರಿ ಅಥವಾ ಆಯಾ ತಾಲ್ಲೂಕಿನ ತಹಶೀಲ್ದಾರ್ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

Leave a Reply

Your email address will not be published. Required fields are marked *