
ಹುಬ್ಬಳ್ಳಿ: ಉತ್ತರ ಕರ್ನಾಟಕವು ರಂಗಭೂಮಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ನೂರಾರು ಕಲಾವಿದರ ಬದುಕಿಗೆ ಆಸರೆಯಾಗಿ ನಿಂತಿದೆ ಎಂದು ಖ್ಯಾತ ಚಿತ್ರ ನಿರ್ದೇಶಕ ಹಾಗೂ ಸಾಹಿತಿ ಹಿರಿಯೂರು ರಾಘವೇಂದ್ರ ಅಭಿಪ್ರಾಯಪಟ್ಟರು.
ನಗರದ ಭವಾನಿ ನಗರದಲ್ಲಿ ಡಾ. ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ಹಿರಿಯ ರಂಗಕರ್ಮಿ, ಸಿನಿಮಾ ಹಾಗೂ ಧಾರವಾಹಿ ನಟಿ ಮಾಲತೇಶ್ರೀ ಮೈಸೂರು ಅವರಿಗೆ ಏರ್ಪಡಿಸಲಾಗಿದ್ದ ಗೌರವ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಸಿನಿಮಾ ಮತ್ತು ಧಾರವಾಹಿಗಳ ಮೂಲಕ ಮನೆಮಾತಾಗಿರುವ ಮಾಲತೇಶ್ರೀ ಮೈಸೂರು ಅವರಿಗೆ ಹುಬ್ಬಳ್ಳಿಯ ನೆಲದಲ್ಲಿ ಸನ್ಮಾನಿಸುತ್ತಿರುವುದು ಅತ್ಯಂತ ಸಂತಸದ ವಿಷಯ. ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಅಪಾರ ಪ್ರತಿಭೆಗಳು ಮಿಂಚುತ್ತಿದ್ದು, ಅಂತಹ ಪ್ರತಿಭೆಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡುವ ಅಗತ್ಯವಿದೆ. ಬೆಂಗಳೂರಿನ ಚಿತ್ರರಂಗದಲ್ಲಿ ಉತ್ತರ ಕರ್ನಾಟಕ ಭಾಗದ ನಟ-ನಟಿಯರು ಹಾಗೂ ತಾಂತ್ರಿಕ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ನಾನು ಕೂಡ ನನ್ನ ನಿರ್ದೇಶನದ ಸಿನಿಮಾ ಹಾಗೂ ಧಾರವಾಹಿಗಳಲ್ಲಿ ಈ ಭಾಗದ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡುತ್ತಾ ಬಂದಿದ್ದೇನೆ ಎಂದು ಅವರು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ನಟಿ ಮಾಲತೇಶ್ರೀ ಮೈಸೂರು ಅವರಿಗೆ ಪ್ರತಿಷ್ಠಾನದ ವತಿಯಿಂದ ಆತ್ಮೀಯ ಸನ್ಮಾನ ನೆರವೇರಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕವು ನನಗೆ ತವರು ಮನೆಯಿದ್ದಂತೆ. ಈ ಭಾಗದಲ್ಲಿ ಅತಿ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ ತೃಪ್ತಿ ನನಗಿದೆ. ಇಲ್ಲಿನ ಜನರ ಪ್ರೀತಿ ಹಾಗೂ ಋಣವನ್ನು ತೀರಿಸಲು ಅಸಾಧ್ಯ. ರಂಗಭೂಮಿಯ ಈ ಪಯಣದ ನೆನಪಿಗಾಗಿ ಗೋಕಾಕದಲ್ಲಿ ಪ್ರತಿ ವರ್ಷ ರಂಗಕರ್ಮಿಗಳನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಮಾಡುತ್ತಿರುವೆ. ನಿಮ್ಮೆಲ್ಲರ ಆಶೀರ್ವಾದ ನಮ್ಮಂತಹ ಕಲಾವಿದರ ಮೇಲೆ ಸದಾ ಇರಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಪ್ರೊ. ವೆಂಕಟೇಶ ಚೌತಾಯ್ ಹಾಗೂ ಚಿತ್ರಕಲಾವಿದ ಗೋವರ್ಧನ್ ಅವರು ಸನ್ಮಾನಿತರ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಪ್ರಮುಖರಾದ ಬಸವರಾಜ ಕರ್ಕಿ, ರಾಘವೇಂದ್ರ ರಾಯ್ಕರ್, ಕವಿತಾ ಹಿರೇಮಠ ಮತ್ತು ಚಂದ್ರಹಾಸ ವೇರ್ಣೇಕರ್ ಉಪಸ್ಥಿತರಿದ್ದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ. ವೀರೇಶ್ ಹಂಡಿಗಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಸಾಹಿತ್ಯ ಸಮಿತಿಯ ಡಾ. ಪ್ರಭು ಗಂಜಿಹಾಳ್ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

