
ಲಖನೌ: ಟ್ರ್ಯಾಕ್ಟರ್ ಟ್ರಾಲಿಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಂದಿ ಸ್ಥಳದಲ್ಲೇ ಸಾವನ್ನಪ್ಪಿ, 43 ಮಂದಿ ಗಾಯಗೊಂಡಿರುವ ದುರಂತ ಘಟನೆ ಉತ್ತರ ಪ್ರದೇಶದ ಬುಲಂದ್ಶಹರ್ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ನಡೆದಿದೆ.
ಬುಲಂದ್ಶಹರ್-ಅಲಿಗಢ
ಗಡಿಯಲ್ಲಿರುವ ಅರ್ನಿಯಾ ಬೈಪಾಸ್ ಬಳಿ ಬೆಳಗಿನ ಜಾವ 2.10ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಕ್ಯಾಂಟರ್ ಟ್ರಕ್ ಹಿಂಬದಿಯಿಂದ ಟ್ರ್ಯಾಕ್ಟರ್ ಟ್ರಾಲಿಗೆ ಡಿಕ್ಕಿ ಹೊಡೆದ ರಭಸಕ್ಕೆ ಟ್ರಾಲಿ ಪಲ್ಟಿಯಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ತೀರ್ಥಯಾತ್ರೆಗೆ ತೆರಳುತ್ತಿದ್ದ ಯಾತ್ರಾರ್ಥಿಗಳು:
ಟ್ರಾಕ್ಟರ್ ಟ್ರಾಲಿಯಲ್ಲಿ ಒಟ್ಟು 61 ಜನ ಪ್ರಯಾಣಿಸುತ್ತಿದ್ದರು. ಈ ಯಾತ್ರಾರ್ಥಿಗಳು ಕಾಸ್ಗಂಜ್ ಜಿಲ್ಲೆಯ ರಫತ್ಪುರ ಗ್ರಾಮದಿಂದ ರಾಜಸ್ಥಾನದ ಜಹರ್ಪೀರ್ಗೆ ತೀರ್ಥಯಾತ್ರೆಗೆ ತೆರಳುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಮೃತಪಟ್ಟ 8 ಮಂದಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಗಾಯಗೊಂಡ 43 ಮಂದಿಯನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

