
ಕೊಪ್ಪಳ: ಮಹಿಳೆಯರು ಮನೆಯಲ್ಲಿ ಕುಳಿತು ಮೊಬೈಲ್‌ನಲ್ಲಿ ಸಮಯ ವ್ಯರ್ಥ ಮಾಡುವ ಬದಲು, ಆರಿ ಕೌಶಲ್ಯದಂತಹ ತರಬೇತಿಗಳನ್ನು ಪಡೆದು ಸ್ವಾವಲಂಬಿ ಜೀವನ ನಡೆಸಬೇಕು ಎಂದು ಕೊಪ್ಪಳ ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ಸುನೀತಾ ಎಸ್. ಅಂಟ ಕರೆ ನೀಡಿದರು. ನಗರದ ಭಾಗ್ಯನಗರದ ಸುಮೇಧಾ ಫ್ಯಾಷನ್ ಇನ್ಸ್ಟಿಟ್ಯೂಟ್‌ನಲ್ಲಿ ಸೋಮವಾರ ಆಯೋಜಿಸಲಾಗಿದ್ದ ಗ್ರಾಮೀಣ ಮಹಿಳೆಯರಿಗಾಗಿನ 10 ದಿನಗಳ ಉಚಿತ ‘ಆರಿ ಕೌಶಲ್ಯ ತರಬೇತಿ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಮಣಿಪಾಲದ T M G ಸುನಿಧಿ ಫೌಂಡೇಶನ್ ಟ್ರಸ್ಟ್, ಭಾರತೀಯ ವಿಕಾಸ ಟ್ರಸ್ಟ್ ಹಾಗೂ ಕಾರ್ಕಳದ ಶ್ರೀನಿವಾಸ ಸೇವಾ ಟ್ರಸ್ಟ್ ಸಹಯೋಗದಲ್ಲಿ ಈ ವಿಶೇಷ ಕೌಶಲ್ಯ ಅಭಿವೃದ್ಧಿ ಶಿಬಿರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲದ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಅವರು ಮಾತನಾಡಿ, 10 ದಿನಗಳ ಕಾಲ ಅತ್ಯಂತ ಶ್ರದ್ಧೆಯಿಂದ ತರಬೇತಿ ಪೂರೈಸಿದ ಮಹಿಳೆಯರ ಕೌಶಲ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಹಿಳೆಯರು ತರಬೇತಿಯ ನಂತರ ಸುಮ್ಮನೆ ಕುಳಿತುಕೊಳ್ಳದೆ, ಇದನ್ನೇ ಒಂದು ಉದ್ಯೋಗವನ್ನಾಗಿ ಮಾಡಿಕೊಂಡು ಸ್ವಂತ ಕಾಲಿನ ಮೇಲೆ ನಿಲ್ಲಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು. ಸುಮೇಧಾ ಫ್ಯಾಷನ್ ಇನ್ಸ್ಟಿಟ್ಯೂಟ್ ನಿರ್ದೇಶಕಿ ಸಾಧನಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಆರಿ ಕೌಶಲ್ಯ ತರಬೇತಿಯ ಪ್ರಯೋಜನಗಳು ಹಾಗೂ ತರಬೇತಿ ಪಡೆದ ಮಹಿಳೆಯರು ಮುಂದಿನ ದಿನಗಳಲ್ಲಿ ಕೈಗೊಳ್ಳಬಹುದಾದ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ವಿವರಿಸುತ್ತಾ, ಶಿಬಿರದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಇದೇ ಸಂದರ್ಭದಲ್ಲಿ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ಕೊಪ್ಪಳ ಜಿಲ್ಲೆಯ ಗ್ರಾಮೀಣ ಭಾಗದ 30 ಮಹಿಳೆಯರಿಗೆ ಭಾರತೀಯ ವಿಕಾಸ ಟ್ರಸ್ಟ್ ವತಿಯಿಂದ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ತರಬೇತಿ ಪಡೆದ ಮಹಿಳೆಯರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ, ಈ 10 ದಿನಗಳ ಕಲಿಕೆ ತಮ್ಮಲ್ಲಿ ಆತ್ಮವಿಶ್ವಾಸ ಮೂಡಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಇನ್ನರ್ ವೀಲ್ ಸಂಸ್ಥೆಯ ಕಾರ್ಯದರ್ಶಿ ರಮಾ, ಪತ್ರಕರ್ತ ರಮೇಶ್, ಸಂಪನ್ಮೂಲ ವ್ಯಕ್ತಿ ಹಾಗೂ ಸುಮೇಧ ಫ್ಯಾಷನ್ ಇನ್ಸ್ಟಿಟ್ಯೂಟ್‌ನ ಸಹ-ಸಂಸ್ಥಾಪಕ ಸುತೇಜ ಆಶ್ರೀತ್ ಉಪಸ್ಥಿತರಿದ್ದರು. ಸೌಭಾಗ್ಯ ಸ್ವಾಗತಿಸಿದರೆ, ಮಧುಶ್ರೀ ಯರಾಶಿ ಕಾರ್ಯಕ್ರಮ ನಿರೂಪಿಸಿದರು ಮತ್ತು ಸಂಗೀತಾ ವಂದನಾರ್ಪಣೆ ಮಾಡಿದರು.

