ಗಣಿತ ಪರೀಕ್ಷೆ ಬರೆಯುತ್ತಿದ್ದ ಹತ್ತನೇ ತರಗತಿ ವಿದ್ಯಾರ್ಥಿನಿ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ

Spread the love

ಧಾರ್ (ಮಧ್ಯಪ್ರದೇಶ): ಇಲ್ಲಿನ ಜಿಲ್ಲೆಯ ಪರೀಕ್ಷಾ ಕೇಂದ್ರವೊಂದರಲ್ಲಿ ಹತ್ತನೇ ತರಗತಿ ಬೋರ್ಡ್ ಪರೀಕ್ಷೆ ನಡೆಯುತ್ತಿದ್ದ ವೇಳೆ ಅನಿರೀಕ್ಷಿತ ಘಟನೆಯೊಂದು ಸಂಭವಿಸಿದ್ದು, ಗಣಿತ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಶೌಚಾಲಯದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಫೆಬ್ರವರಿ 26ರಂದು ನಡೆದ ಈ ಘಟನೆಯು ಶೈಕ್ಷಣಿಕ ವಲಯ ಹಾಗೂ ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

​ಪರೀಕ್ಷಾ ಕೊಠಡಿಯಲ್ಲಿ ಗಣಿತದ ಪ್ರಶ್ನೆಪತ್ರಿಕೆ ಬಿಡಿಸುತ್ತಿದ್ದ ವಿದ್ಯಾರ್ಥಿನಿಗೆ ದಿಢೀರ್ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದೆ. ನೋವಿನಿಂದ ಅಸ್ವಸ್ಥಳಾದ ಆಕೆ ಕೂಡಲೇ ಪರೀಕ್ಷಾ ಮೇಲ್ವಿಚಾರಕರಿಂದ ಅನುಮತಿ ಪಡೆದು ಶೌಚಾಲಯಕ್ಕೆ ತೆರಳಿದ್ದಾಳೆ. ಆಕೆ ಹೋದ ಕೆಲವೇ ಕ್ಷಣಗಳಲ್ಲಿ ಮಗುವಿನ ಅಳುವ ಧ್ವನಿ ಕೇಳಿಬಂದಿದ್ದು, ಇದರಿಂದ ಆತಂಕಗೊಂಡ ಶಿಕ್ಷಕರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಅಲ್ಲಿ ವಿದ್ಯಾರ್ಥಿನಿ ಅಸ್ವಸ್ಥ ಸ್ಥಿತಿಯಲ್ಲಿದ್ದು, ಪಕ್ಕದಲ್ಲೇ ನವಜಾತ ಶಿಶು ಇರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಶಾಲಾ ಸಿಬ್ಬಂದಿ ಆಂಬುಲೆನ್ಸ್ ಕರೆಸಿ ತಾಯಿ ಮತ್ತು ಮಗುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.

​ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಯಿ ಮತ್ತು ಸುಮಾರು 2 ಕೆ.ಜಿ ತೂಕದ ಗಂಡು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ವಿಷಯ ತಿಳಿದು ಆಸ್ಪತ್ರೆಗೆ ಆಗಮಿಸಿದ ಪೋಷಕರು, ತಮ್ಮ ಮಗಳ ಗರ್ಭಧಾರಣೆಯ ಬಗ್ಗೆ ನಮಗೆ ಯಾವುದೇ ಸುಳಿವು ಇರಲಿಲ್ಲ ಎಂದು ಹೇಳಿಕೆ ನೀಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಮೂಲಗಳ ಮಾಹಿತಿ ಪ್ರಕಾರ, ವಿದ್ಯಾರ್ಥಿನಿಗೆ ಈಗಾಗಲೇ ನಿಶ್ಚಿತಾರ್ಥವಾಗಿದ್ದು, ಆಕೆಗೆ 18 ವರ್ಷ ತುಂಬಿದ ನಂತರ ಮದುವೆ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದರು ಎನ್ನಲಾಗಿದೆ. ಘಟನೆಯ ಕುರಿತು ಪೊಲೀಸರು ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ

Leave a Reply

Your email address will not be published. Required fields are marked *