
ನವಲಗುಂದ: ಪಟ್ಟಣದ ಇತಿಹಾಸ ಪ್ರಸಿದ್ಧ ಹಾಗೂ ಕಲಿಯುಗದ ಕಾಮಧೇನು ಎಂದೇ ಖ್ಯಾತಿ ಪಡೆದಿರುವ ರಾಮಲಿಂಗ ಓಣಿಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಕಳಸಾರೋಹಣ, ಯಾತ್ರಿ ನಿವಾಸ, ಟ್ರಸ್ಟ್ ಕಾರ್ಯಾಲಯ ಹಾಗೂ ಭಕ್ತರಿಗಾಗಿ ನಿರ್ಮಿಸಲಾದ ಮನೆಗಳ ಉದ್ಘಾಟನಾ ಸಮಾರಂಭವು ಫೆಬ್ರವರಿ 24ರಿಂದ 26ರ ವರೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ ಎಂದು ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಯಲ್ಲಪ್ಪ ಭೋವಿ ತಿಳಿಸಿದರು.
ಭಾನುವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದ ಅವರು, ಫೆಬ್ರವರಿ 24ರಂದು ಬೆಳಿಗ್ಗೆ 8 ಗಂಟೆಗೆ ಮುತ್ತೈದೆಯರಿಂದ ಕುಂಭಮೇಳ ಹಾಗೂ ವಿವಿಧ ವಾದ್ಯಮೇಳಗಳೊಂದಿಗೆ ಕಳಸದ ಭವ್ಯ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಯು ನೀಲಮ್ಮನ ಕೆರೆಯಿಂದ ಪ್ರಾರಂಭವಾಗಿ ಮಾರುಕಟ್ಟೆ ಮಾರ್ಗವಾಗಿ ಗಣಪತಿ ದೇವಸ್ಥಾನ, ಗವಿಮಠ, ನಾಗಲಿಂಗಮಠ, ಭೋವಿ ಓಣಿ ಹಾಗೂ ಗುಡ್ಡದ ಕೇರಿ ಓಣಿಯ ಮೂಲಕ ಸಂಚರಿಸಿ ರಾಮಲಿಂಗ ಕಾಮದೇವರ ದೇವಸ್ಥಾನವನ್ನು ತಲುಪಲಿದೆ ಎಂದು ವಿವರಿಸಿದರು.
ಧಾರ್ಮಿಕ ವಿಧಿವಿಧಾನಗಳ ಕುರಿತು ಮಾಹಿತಿ ನೀಡಿದ ಅವರು, ಫೆಬ್ರವರಿ 25ರ ಬುಧವಾರ ಸಂಜೆ 5 ಗಂಟೆಗೆ ಯಾಗಶಾಲೆ ಪ್ರವೇಶ, ಶೈವಪಣ್ಯವಾಚನ, ಪಂಚಗವ್ಯ ಶುದ್ಧಿ ಸೇರಿದಂತೆ ರಕ್ಷೋಘ್ನ ಹೋಮ, ಅಘೋರಾಶ್ರಮ ಹೋಮ, ಗ್ರಾಮಶಾಂತಿ ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ರುದ್ರ ಹೋಮಗಳು ಜರುಗಲಿವೆ. ಫೆಬ್ರವರಿ 26ರಂದು ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಮೂಲ ಮೂರ್ತಿಗೆ ಕಲಶಾಭಿಷೇಕ, ನ್ಯಾಸಕ್ರಮ ಪ್ರಧಾನ ಹೋಮ ಹಾಗೂ ಜೀವಾತ್ಮ ಪ್ರತಿಷ್ಠಾಪನೆ ನೆರವೇರಲಿದೆ. ತದನಂತರ ಶಿಖರ ಕಳಸಾರೋಹಣ, ಮಹಾ ಪೂರ್ಣಾಹುತಿ ಮತ್ತು ಮಹಾಮಂಗಳಾರತಿ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಸಂಪನ್ನಗೊಳ್ಳಲಿವೆ.
ಅದೇ ದಿನ ಬೆಳಿಗ್ಗೆ 11 ಗಂಟೆಗೆ ನೂತನವಾಗಿ ನಿರ್ಮಿಸಲಾದ ಯಾತ್ರಿ ನಿವಾಸ ಮತ್ತು ಕಾರ್ಯಾಲಯಗಳ ಉದ್ಘಾಟನೆ ಹಾಗೂ ಭಕ್ತರಿಗೆ ಮನೆಗಳ ಹಸ್ತಾಂತರ ಕಾರ್ಯಕ್ರಮ ಜರುಗಲಿದೆ. ಈ ಸಮಾರಂಭದ ಉದ್ಘಾಟಕರಾಗಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪಾಲ್ಗೊಳ್ಳಲಿದ್ದಾರೆ. ಸ್ಥಳೀಯ ಶಾಸಕ ಎನ್.ಎಚ್. ಕೋನರಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಸಚಿವರಾದ ಶಂಕರ ಪಾಟೀಲ್ ಮುನೇನಕೊಪ್ಪ, ಕೆ.ಎನ್. ಗಡ್ಡಿ, ವಿನೋದ್ ಅಸೂಟಿ ಸೇರಿದಂತೆ ಅನೇಕ ಗಣ್ಯರು ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.
ನಂತರ ನಡೆಯುವ ಧರ್ಮ ಸಭೆಯ ಸಾನ್ನಿಧ್ಯವನ್ನು ಶಿರಹಟ್ಟಿ ಭಾವೈಕ್ಯ ಮಠದ ಶ್ರೀ ಫಕ್ಕೀರ ಸಿದ್ದರಾಮ ಮಹಾಸ್ವಾಮಿಗಳು ವಹಿಸಲಿದ್ದು, ಪಂಚಗ್ರಹ ಹಿರೇಮಠದ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಗವಿಮಠದ ಶ್ರೀ ಬಸವಲಿಂಗಸ್ವಾಮಿಜಿ, ಮಣಕವಾಡ ದೇವಮಂದಿರದ ಶ್ರೀ ಮೃತ್ಯುಂಜಯ ಸ್ವಾಮೀಜಿ ಹಾಗೂ ನಾಗಲಿಂಗ ಮಠದ ಶ್ರೀ ವೀರಯ್ಯ ಸ್ವಾಮೀಜಿ ಅವರು ನೇತೃತ್ವ ವಹಿಸಲಿದ್ದಾರೆ ಎಂದು ಯಲ್ಲಪ್ಪ ಭೋವಿ ತಿಳಿಸಿದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಜಲಾದಿ, ಶಶಿಧರ ಭರತಭೋಜನಮಠ ಸೇರಿದಂತೆ ಟ್ರಸ್ಟ್‌ನ ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

