
ನವದೆಹಲಿ: ಕಳೆದ ಐದು ವರ್ಷಗಳಲ್ಲಿ ದೇಶದ ಪ್ರಮುಖ ಬಂದರುಗಳಲ್ಲಿ ₹11,300 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರಲ್ಲಿ ಗುಜರಾತ್‌ನ ಮುದ್ರಾ ಅದಾನಿ ಬಂದರಿನಲ್ಲಿ ಮಾತ್ರ ಸುಮಾರು ₹6,000 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಸಿಪಿಐ ಸಂಸದ ಪಿ.ಪಿ. ಸುಧೀರ್ ಅವರ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಉತ್ತರ ನೀಡಿದ ಗೃಹ ಸಚಿವಾಲಯ, 2020-2024ರ ನಡುವೆ ಒಂಬತ್ತು ಭಾರತೀಯ ಬಂದರುಗಳಲ್ಲಿ ಒಟ್ಟು 19 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ, ಮುಂಬೈನ ಜವಾಹರಲಾಲ್ ನೆಹರೂ ಬಂದರು ಏಳು ಪ್ರಕರಣಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಅದಾನಿ ಬಂದರಿನಲ್ಲಿ ಮೂರು ಪ್ರಮುಖ ಪ್ರಕರಣಗಳು ವರದಿಯಾಗಿವೆ.
ಒಂದೇ ದಿನದ ಕಾರ್ಯಾಚರಣೆಯಲ್ಲಿ ಕೋಟಿಗಟ್ಟಲೆ ಹೆರಾಯಿನ್:
ಗೃಹ ಸಚಿವಾಲಯದ ಮಾಹಿತಿ ಪ್ರಕಾರ, 2021ರ ಸೆಪ್ಟೆಂಬರ್ 19ರಂದು ಮುಂದ್ರಾದ ಅದಾನಿ ಬಂದರಿನಲ್ಲಿ ಅತಿ ಹೆಚ್ಚು ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆ ಒಂದೇ ಕಾರ್ಯಾಚರಣೆಯಲ್ಲಿ ₹5,976 ಕೋಟಿ ಮೌಲ್ಯದ ಸುಮಾರು 2,988 ಕೆಜಿ ಹೆರಾಯಿನ್ ಜಪ್ತಿಯಾಗಿತ್ತು. ಈ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದ್ದು, ಮೂವರು ದಲ್ಲಾಳಿಗಳ ಪರವಾನಗಿಗಳನ್ನು ರದ್ದುಪಡಿಸಲಾಗಿದೆ.
ಇದರ ಜೊತೆಗೆ, 2022ರ ಮೇ 26ರಂದು ₹260 ಕೋಟಿ ಮೌಲ್ಯದ 52 ಕೆಜಿ ಕೊಕೇನ್ ಮತ್ತು ಅದೇ ವರ್ಷದ ಜುಲೈ 11ರಂದು ₹150 ಕೋಟಿ ಮೌಲ್ಯದ 75 ಕೆಜಿ ಹೆರಾಯಿನ್ ಅನ್ನು ಅದಾನಿ ಬಂದರಿನಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಈ ಘಟನೆಗಳು ಬಂದರುಗಳಲ್ಲಿ ನಡೆಯುತ್ತಿರುವ ಅಕ್ರಮ ಮಾದಕ ವಸ್ತು ಸಾಗಾಟದ ಗಂಭೀರತೆಯನ್ನು ಎತ್ತಿ ಹಿಡಿದಿವೆ.

