
ಬೆಂಗಳೂರು: ರಾಜ್ಯದ ಹಿಂದುಳಿದ ವರ್ಗಗಳ ಅಲೆಮಾರಿ, ಅರೆ ಅಲೆಮಾರಿ ಹಾಗೂ ವಿಮುಕ್ತ ಬುಡಕಟ್ಟು ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ಮುಂಬರುವ 2026-27ನೇ ಸಾಲಿನ ಆಯವ್ಯಯದಲ್ಲಿ 250 ಕೋಟಿ ರೂಪಾಯಿಗಳನ್ನು ಮೀಸಲಿಡಬೇಕು ಎಂದು ರಾಜ್ಯ ಅಲೆಮಾರಿ ಒಕ್ಕೂಟವು ಸರ್ಕಾರವನ್ನು ಒತ್ತಾಯಿಸಿದೆ. ಫೆಬ್ರವರಿ 12ರಂದು ವಿಧಾನಸೌಧದ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ‘ರಾಜ್ಯ ಅಲೆಮಾರಿ, ಅರೆ ಅಲೆಮಾರಿ ಹಾಗೂ ವಿಮುಕ್ತ ಬುಡಕಟ್ಟು ಸಮುದಾಯಗಳ ಒಕ್ಕೂಟ’ದ ವತಿಯಿಂದ ಈ ಮನವಿ ಸಲ್ಲಿಸಲಾಯಿತು.
ಒಕ್ಕೂಟದ ರಾಜ್ಯಾಧ್ಯಕ್ಷರಾದ ಶಿವಾನಂದ ಪಾಚಂಗಿ ಅವರು ಸಭೆಯಲ್ಲಿ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಹಮ್ಮಿಕೊಳ್ಳಬೇಕಾದ ಯೋಜನೆಗಳ ಕುರಿತು ಸುದೀರ್ಘವಾಗಿ ಮಾತನಾಡಿ, ಅಲೆಮಾರಿ ಸಮುದಾಯಗಳ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸುವಂತೆ ವಿನಂತಿಸಿದರು. ಪ್ರಸಕ್ತ ಬಜೆಟ್‌ನಲ್ಲಿ ಕನಿಷ್ಠ 250 ಕೋಟಿ ರೂ.ಗಳ ಅನುದಾನವನ್ನು ಮಂಜೂರು ಮಾಡುವ ಮೂಲಕ ಅಲೆಮಾರಿಗಳ ಬದುಕಿಗೆ ಆಸರೆಯಾಗಬೇಕು ಎಂದು ಅವರು ಮನವಿ ಪತ್ರ ಅರ್ಪಿಸಿದರು. ಈ ಮಹತ್ವದ ಸಭೆಯಲ್ಲಿ ಒಕ್ಕೂಟದ ಪ್ರಮುಖರಾದ ಶ್ರೀ ಗಳೆಪ್ಪಾ ಪಾಚಂಗಿ, ಮಾರ್ತಾಂಡಪ್ಪ ನಾಯಕಲ್ಲ, ನಮ್ದೇವ ಆಟಕೆ, ಶಶಿಕಾಂತ ಜೋಶಿ, ರಮೇಶ್ ಸಿಂಗನಾಥ್, ನಟರಾಜ್ ದುರ್ವೆ ಸೇರಿದಂತೆ ಹಲವು ಮುಖಂಡರು ಹಾಜರಿದ್ದು, ಸಮುದಾಯದ ಪರವಾಗಿ ಧ್ವನಿ ಎತ್ತಿದರು. ಹಿಂದುಳಿದವರ ಮತ್ತು ಶೋಷಿತರ ಪರವಾಗಿ ಸದಾ ಮಿಡಿಯುವ ಮುಖ್ಯಮಂತ್ರಿಗಳು ಈ ಬಾರಿಯ ಬಜೆಟ್‌ನಲ್ಲಿ ಅಲೆಮಾರಿ ಸಮುದಾಯಗಳ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸವನ್ನು ಒಕ್ಕೂಟದ ಪದಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

