
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ಮತ್ತು ಅದಕ್ಷತೆಯ ಕುರಿತು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇತ್ತೀಚೆಗೆ 20 ಕೆಎಎಸ್ (KAS) ಅಧಿಕಾರಿಗಳಿಗೆ ಬಡ್ತಿ ನೀಡಿ ಹೊರಡಿಸಲಾದ ಆದೇಶದ ಪಟ್ಟಿಯಲ್ಲಿ, ಈಗಾಗಲೇ ಸೇವೆಯಿಂದ ನಿವೃತ್ತರಾಗಿ ಸಂನ್ಯಾಸ ಸ್ವೀಕರಿಸಿರುವ ಅಧಿಕಾರಿಯ ಹೆಸರಿರುವುದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಸರ್ಕಾರದ ಈ ಎಡವಟ್ಟನ್ನು ಕಟುವಾಗಿ ಟೀಕಿಸಿರುವ ಅಶೋಕ್ ಅವರು, “ಸಾವಿರ ಎಡವಟ್ಟುಗಳ ಕಾಂಗ್ರೆಸ್ ಸರ್ಕಾರದಲ್ಲಿ ನಿವೃತ್ತ ಅಧಿಕಾರಿಗೂ ಸರ್ವಿಸ್ ಬಡ್ತಿ ಸಿಗುತ್ತಿದೆ” ಎಂದು ವ್ಯಂಗ್ಯವಾಡಿದ್ದಾರೆ. ಕೆಎಎಸ್ ಅಧಿಕಾರಿಯಾಗಿದ್ದ ಎಚ್.ಎಲ್. ನಾಗರಾಜ ಅವರು ಈಗಾಗಲೇ ಸ್ವಯಂ ನಿವೃತ್ತಿ ಪಡೆದು, ಪ್ರಸ್ತುತ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯಾಗಿ ಪೀಠಾಧಿಪತಿಯಾಗಿದ್ದಾರೆ. ಆಧ್ಯಾತ್ಮಿಕ ಜೀವನ ನಡೆಸುತ್ತಿರುವವರಿಗೂ ಬಡ್ತಿ ನೀಡುವ ಮೂಲಕ ಸರ್ಕಾರ ತನ್ನ ಅಸಮರ್ಥತೆಯನ್ನು ಜಗಜ್ಜಾಹೀರು ಮಾಡಿದೆ ಎಂದು ಅವರು ಕಿಡಿಕಾರಿದ್ದಾರೆ.

”ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನಿಮ್ಮ ಸರ್ಕಾರದ ದಾಖಲೆಗಳಲ್ಲಿ ಸಂನ್ಯಾಸ ಸ್ವೀಕರಿಸಿದವರೂ ಇನ್ನೂ ಸೇವೆಯಲ್ಲಿರುವ ಅಧಿಕಾರಿಗಳೇ? ಸಚಿವರು ಮತ್ತು ಅಧಿಕಾರಿಗಳು ಕಡತಗಳಿಗೆ ಸಹಿ ಹಾಕುವ ಮುನ್ನ ಅವುಗಳನ್ನು ಓದುತ್ತಾರೋ ಅಥವಾ ಕಣ್ಣು ಮುಚ್ಚಿ ಸಹಿ ಮಾಡುತ್ತಾರೋ?” ಎಂದು ಅಶೋಕ್ ಪ್ರಶ್ನಿಸಿದ್ದಾರೆ. ಯಾರು ಸೇವೆಯಲ್ಲಿದ್ದಾರೆ ಮತ್ತು ಯಾರು ನಿವೃತ್ತರಾಗಿದ್ದಾರೆ ಎಂಬ ಕನಿಷ್ಠ ಮಾಹಿತಿಯೂ ಇಲ್ಲದ ಈ ಸರ್ಕಾರದಿಂದ ಜನತೆ ಅಭಿವೃದ್ಧಿಯನ್ನು ಹೇಗೆ ನಿರೀಕ್ಷಿಸಲು ಸಾಧ್ಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಿನಕ್ಕೊಂದು ಎಡವಟ್ಟು ಮಾಡುತ್ತಾ ಆಡಳಿತ ವ್ಯವಸ್ಥೆಯನ್ನು ಕುಸಿಯುವಂತೆ ಮಾಡಿರುವ ಈ ಸರ್ಕಾರಕ್ಕೆ ಕೂಡಲೇ ರಾಜೀನಾಮೆ ನೀಡಿ ಕರ್ನಾಟಕದ ಗೌರವ ಉಳಿಸಿ ಎಂದು ಅವರು ಒತ್ತಾಯಿಸಿದ್ದಾರೆ. ಇವತ್ತು ನಿವೃತ್ತರಿಗೆ ಬಡ್ತಿ ನೀಡಿದವರು, ನಾಳೆ ಮೃತರಾದವರಿಗೂ ವರ್ಗಾವಣೆ ಆದೇಶ ನೀಡಿದರೂ ಆಶ್ಚರ್ಯವಿಲ್ಲ ಎಂದು ಲೇವಡಿ ಮಾಡುವ ಮೂಲಕ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

