
ಧಾರವಾಡ: ಕರ್ತವ್ಯ ನಿಮಿತ್ತ ಪ್ರಯಾಣಿಸುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದ್ದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (ಡಿ.ಎ.ಆರ್.) ಪೊಲೀಸ್ ಸಿಬ್ಬಂದಿ ದಿ. ಯಲ್ಲಪ್ಪ ಮಡಿವಾಳಪ್ಪ ಕುಂಬಾರ ಅವರ ಕುಟುಂಬಕ್ಕೆ ಪೊಲೀಸ್ ಸ್ಯಾಲರಿ ಪ್ಯಾಕೇಜ್ ಯೋಜನೆಯಡಿ 70 ಲಕ್ಷ ರೂಪಾಯಿಗಳ ವಿಮಾ ಮೊತ್ತದ ಚೆಕ್ಕನ್ನು ಶುಕ್ರವಾರ ಹಸ್ತಾಂತರಿಸಲಾಯಿತು.
ನಗರದ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಪರೇಡ್ ಸಂದರ್ಭದಲ್ಲಿ ಮೃತರ ಕುಟುಂಬದವರಿಗೆ ಈ ಮೊತ್ತವನ್ನು ವಿತರಿಸಲಾಯಿತು. 2025ರ ಜೂನ್ 21ರಂದು ರಾತ್ರಿ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯ ಇಟಿಗಟ್ಟಿ ಬಳಿ ಮೋಟಾರ್ ಸೈಕಲ್ ಮೇಲೆ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 52 ವರ್ಷದ ಯಲ್ಲಪ್ಪ ಕುಂಬಾರ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಇವರು ಹುಬ್ಬಳ್ಳಿಯ ಆನಂದ ನಗರದ ನಿವಾಸಿಯಾಗಿದ್ದರು.
ಬ್ಯಾಂಕ್ ಆಫ್ ಬರೋಡಾದ ಧಾರವಾಡ ಶಾಖೆಯ ವತಿಯಿಂದ ಪೊಲೀಸ್ ಸ್ಯಾಲರಿ ಪ್ಯಾಕೇಜ್ ಅಡಿಯಲ್ಲಿ ಈ ದೊಡ್ಡ ಮೊತ್ತದ ಪರಿಹಾರವನ್ನು ನೀಡಲಾಗಿದೆ. ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ನಿವೃತ್ತ ಏರ್ ಕಮಾಂಡರ್ ಹಾಗೂ ಬ್ಯಾಂಕ್ ಆಫ್ ಬರೋಡಾದ ರಕ್ಷಣಾ ಬ್ಯಾಂಕಿಂಗ್ ಮುಖ್ಯಸ್ಥ ತರುಣ್ ಕುಮಾರ್ ಸಿನ್ಹಾ, ಎಜಿಎಂ ಅಮರೇಶ್ ಗೌಡ ಸೇರಿದಂತೆ ಬ್ಯಾಂಕಿನ ಹಿರಿಯ ಅಧಿಕಾರಿಗಳಾದ ಚಿನ್ನರಾವ್, ಮಲ್ಲಿಕಾರ್ಜುನ ಗೌಡ ಗೌಡರ, ಸುಶೀಲ್ ಕುಮಾರ್ ತ್ರಿಪಾಠಿ ಮತ್ತು ವಿಕ್ರಮ್ ಎಂ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಡಿ.ಎ.ಆರ್. ಡಿಎಸ್ಪಿ ಡಿ.ಎಸ್. ಧನಗರ್ ಹಾಗೂ ಜಿಲ್ಲೆಯ ವಿವಿಧ ಪೊಲೀಸ್ ಅಧಿಕಾರಿಗಳು ಹಾಜರಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಇಲಾಖೆಯ ಸಿಬ್ಬಂದಿಯ ಕುಟುಂಬದ ಹಿತರಕ್ಷಣೆ ಮಾಡುವಲ್ಲಿ ಈ ವಿಮಾ ಯೋಜನೆಯು ಅತ್ಯಂತ ಸಹಕಾರಿಯಾಗಿದೆ ಎಂದು ಈ ವೇಳೆ ಆಶಯ ವ್ಯಕ್ತಪಡಿಸಲಾಯಿತು.

