
ಹುಬ್ಬಳ್ಳಿ: ನಗರದ ಎಸ್ ಕೆ ಕೆ ಸಮಾಜ, ಸೂರ್ಯವಂಶ ಕ್ಷತ್ರಿಯ ಕಲಾಲ್ ಸಮಾಜ ಹಾಗೂ ಯುವಕ ಮತ್ತು ಮಹಿಳಾ ಮಂಡಳದ ಸಂಯುಕ್ತ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ರಥಸಪ್ತಮಿ ಪ್ರಯುಕ್ತ ಭಗವಾನ್ ಶ್ರೀ ಸೂರ್ಯನಾರಾಯಣ ಸ್ವಾಮಿ ಜಯಂತಿಯನ್ನು ಅತ್ಯಂತ ವೈಭವದಿಂದ ಆಚರಿಸಲಾಯಿತು. ಮರಾಠಾಗಲ್ಲಿಯ ಶ್ರೀ ಹನುಮಂತ ದೇವಸ್ಥಾನದ ಆವರಣದಲ್ಲಿ ವಿವಿಧ ಸಾಂಸ್ಕೃತಿಕ ವಾದ್ಯ ಮೇಳಗಳೊಂದಿಗೆ ಹಮ್ಮಿಕೊಳ್ಳಲಾಗಿದ್ದ ಭವ್ಯ ಮೆರವಣಿಗೆಗೆ ಹುಬ್ಬಳ್ಳಿ ರುದ್ರಾಕ್ಷಿ ಮಠದ ಪರಮಪೂಜ್ಯ ಶ್ರೀ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಹಾಗೂ ಶಾಸಕ ಮಹೇಶ್ ಟೆಂಗಿನಕಾಯಿ ಅವರು ಜಂಟಿಯಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಸಮಾಜದ ಸಂಘಟನೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವಲ್ಲಿ ಇಂತಹ ಜಯಂತಿಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಆಶಿಸಿದರು. ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರ ಗಮನ ಸೆಳೆಯಿತು. ವಿವಿಧ ಕಲಾತಂಡಗಳ ಪ್ರದರ್ಶನ ಮೆರವಣಿಗೆಯ ಮೆರುಗನ್ನು ಹೆಚ್ಚಿಸಿತ್ತು. ನಂತರ ಸಮಾಜದ ಕಲ್ಯಾಣ ಮಂಟಪದ ಆವರಣದಲ್ಲಿ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯವನ್ನು ಹುಬ್ಬಳ್ಳಿ ಶ್ರೀ ಮಾತಾ ಆಶ್ರಮದ ಅಧ್ಯಕ್ಷರಾದ ಮಾತಾಜಿ ತೇಜೋಮಯಿ ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಸಮಾಜದ ರಾಜ್ಯಾಧ್ಯಕ್ಷ ಲಕ್ಷ್ಮಣ್ ಗಂಡಗಾಳೆಕರ್, ಕಿತ್ತೂರಿನ ಸೂರ್ಯನಾರಾಯಣ ದೇವಸ್ಥಾನದ ಧರ್ಮದರ್ಶಿ ಸುರೇಶ ಜೋರಾಪೂರ, ಪ್ರಮುಖರಾದ ಸದಾನಂದ ಖಜೂರ್ಕರ್, ಭೀಮಣ್ಣ ಗಂಡಗಾಳೆಕರ್, ಅನಿಲ್ ಕೋಟೆಕರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಸಮಾಜದ ಪದಾಧಿಕಾರಿಗಳಾದ ಮಲ್ಲೇಶಪ್ಪ ಅಂಕುಶಖನಿ, ಮೋಹನ್ ಕೋಟೆಕರ್, ರಾಮಕೃಷ್ಣ ಪರಾಂಡಿಕರ್, ಮನೋಜ್ ಭೀಮಕರ್, ನಾಗರಾಜ್ ಕಲಾಲ್, ಶ್ರೀನಿವಾಸ್ ತಪಸ್ಕರ್ ಸೇರಿದಂತೆ ಮಹಿಳಾ ಮತ್ತು ಯುವಕ ಮಂಡಳದ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು. ಸಮಸ್ತ ಸಮಾಜದ ಬಂಧುಗಳು ತಮ್ಮ ಕುಟುಂಬ ಸಮೇತರಾಗಿ ಭಾಗವಹಿಸಿ ಜಯಂತಿ ಮಹೋತ್ಸವವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಮಾಜದ ಪರವಾಗಿ ಸಂಘಟಕರು ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.

