ರಸ್ತೆ ಅಭಿವೃದ್ಧಿ ವೇಳೆ ತೆರವುಗೊಳಿಸಿದ ‘ಶಿವಲಿಂಗಪ್ಪ ಅಗಡಿ ಮಾರ್ಗ’ ನಾಮಫಲಕ ಮರುಸ್ಥಾಪನೆಗೆ ಒತ್ತಾಯ

Spread the love

ಹುಬ್ಬಳ್ಳಿ, ಜ. 14: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮೇಯರ್ ದಿ. ಶಿವಲಿಂಗಪ್ಪ ಗುರುಸಿದ್ಧಪ್ಪ ಅಗಡಿ ಅವರ ಹೆಸರಿನ ರಸ್ತೆ ನಾಮಫಲಕಗಳನ್ನು, ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ ಶೀಘ್ರವಾಗಿ ಮರುಸ್ಥಾಪಿಸುವಂತೆ ಅಗಡಿ ಕುಟುಂಬಸ್ಥರು ಹಾಗೂ ವಾರ್ಡಿನ ನಾಗರಿಕರು ಮಹಾನಗರ ಪಾಲಿಕೆಗೆ ಒತ್ತಾಯಿಸಿದ್ದಾರೆ.

​ಈ ಕುರಿತು ಮೇಯರ್ ಹಾಗೂ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ ಅವರು, ಶಿವಲಿಂಗಪ್ಪ ಅಗಡಿ ಅವರು ಎರಡು ಅವಧಿಗೆ ಕಾರ್ಪೊರೇಟರ್ ಆಗಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಹಾಗೂ ಮೇಯರ್ ಆಗಿ ಸಲ್ಲಿಸಿದ ನಿಷ್ಠಾವಂತ ಸೇವೆಯನ್ನು ಗೌರವಿಸಿ ಶಿವಾಜಿ ವೃತ್ತದಿಂದ ಸವದತ್ತಿ ರಸ್ತೆಯ ಎಪಿಎಂಸಿ (APMC) ತೋರಣದವರೆಗಿನ ರಸ್ತೆಗೆ “ಶಿವಲಿಂಗಪ್ಪ ಗುರುಸಿದ್ಧಪ್ಪ ಅಗಡಿ ಮಾರ್ಗ” ಎಂದು ಅಧಿಕೃತವಾಗಿ ನಾಮಕರಣ ಮಾಡಲಾಗಿತ್ತು. ಶಿವಾಜಿ ವೃತ್ತ, ಪಟೇಲ್ ಟಿಂಬರ್ ಯಾರ್ಡ್, ಕೆ.ಎಸ್.ಆರ್.ಟಿ.ಸಿ ಡಿಪೋ ವೃತ್ತ ಹಾಗೂ ಎಪಿಎಂಸಿ ಗೇಟ್ ಬಳಿ ನಾಮಫಲಕಗಳನ್ನು ಅಳವಡಿಸಲಾಗಿತ್ತು ಎಂದು ವಿವರಿಸಿದರು.

​ಇತ್ತೀಚೆಗೆ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿಗಳಿಗಾಗಿ ಈ ಫಲಕಗಳನ್ನು ತೆರವುಗೊಳಿಸಲಾಗಿತ್ತು. ಆದರೆ, ಕಾಮಗಾರಿ ಪೂರ್ಣಗೊಂಡರೂ ಫಲಕಗಳನ್ನು ಮರುಸ್ಥಾಪಿಸದಿರುವುದು ಸಾರ್ವಜನಿಕರಿಗೆ ತೊಂದರೆಯುಂಟುಮಾಡುತ್ತಿದ್ದು, ಇದು ಹಿರಿಯರ ಸೇವೆಗೆ ತೋರುವ ಅಗೌರವವಾಗಿದೆ ಎಂದು ನಿಯೋಗವು ಅಸಮಾಧಾನ ವ್ಯಕ್ತಪಡಿಸಿತು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಹಳೆಯ ಸ್ಥಳಗಳಲ್ಲಿಯೇ ನಾಮಫಲಕಗಳನ್ನು ಅಳವಡಿಸಬೇಕೆಂದು ವಾರ್ಡಿನ ಸದಸ್ಯರ ಸಮ್ಮುಖದಲ್ಲಿ ಮನವಿ ಮಾಡಲಾಯಿತು.

​ಈ ಸಂದರ್ಭದಲ್ಲಿ ನ್ಯಾಯವಾದಿ ಗೌರಮ್ಮ ಅಗಡಿ, ವಿಜಯಲಕ್ಷ್ಮಿ ಅಗಡಿ, ಉಮಾ ಅಗಡಿ, ಡಾ. ಬಸವರಾಜ ಅಗಡಿ, ಶಶಿಧರ ಅಗಡಿ, ಸಂಗಣ್ಣ ಹಿತ್ತಲಮನಿ, ದೀಪಕ ಅಗಡಿ, ಜಿಲೇಬಿ ಬಸಣ್ಣ ಸೇರಿದಂತೆ ವಾರ್ಡಿನ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *