
ಬೈಲಹೊಂಗಲ: ಪಟ್ಟಣದ ಒಳಚರಂಡಿ ಮತ್ತು ನೀರಿನ ಶುದ್ಧೀಕರಣ ಘಟಕ ನಿರ್ಮಾಣಕ್ಕಾಗಿ ರೈತರಿಂದ ಭೂಸ್ವಾಧೀನ ಪಡಿಸಿಕೊಂಡ ಜಮೀನಿಗೆ ನ್ಯಾಯಯುತ ಪರಿಹಾರ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸಿದ ಹಿನ್ನೆಲೆಯಲ್ಲಿ, ಇಲ್ಲಿನ ಹಿರಿಯ ದಿವಾಣಿ ನ್ಯಾಯಾಲಯದ ಆದೇಶದಂತೆ ಸೋಮವಾರ ಉಪವಿಭಾಗಾಧಿಕಾರಿಗಳ (ಎಸಿ) ಸರ್ಕಾರಿ ವಾಹನ ಹಾಗೂ ಕಂಪ್ಯೂಟರ್ ಸೇರಿದಂತೆ ವಿವಿಧ ಪೀಠೋಪಕರಣಗಳನ್ನು ಜಪ್ತಿ ಮಾಡಲಾಗಿದೆ.
ಪಟ್ಟಣದ ಒಳಚರಂಡಿ ಯೋಜನೆಗಾಗಿ ನಬೀಸಾಬ ಬೇಪಾರಿ, ಇಮಾಮಹುಸೇನ ಬೇಪಾರಿ ಸೇರಿದಂತೆ ಅವರ ಕುಟುಂಬದ ಒಟ್ಟು 14 ಎಕರೆ 13 ಗುಂಟೆ ಜಮೀನನ್ನು ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ರೈತರು ಯೋಗ್ಯ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾಗ, ನ್ಯಾಯಾಲಯವು ಬಡ್ಡಿ ಸಮೇತ ಒಟ್ಟು 6 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ಆದೇಶಿಸಿತ್ತು. ಈ ಮೊತ್ತದಲ್ಲಿ ಈಗಾಗಲೇ ಹಂತ ಹಂತವಾಗಿ 4 ಕೋಟಿ ರೂಪಾಯಿ ಪಾವತಿಸಲಾಗಿದ್ದರೂ, ಬಾಕಿ ಇರುವ 2 ಕೋಟಿ ರೂಪಾಯಿ ನೀಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರು. ಜಮೀನು ಕಳೆದುಕೊಂಡು 16 ವರ್ಷಗಳೇ ಕಳೆದರೂ ಪೂರ್ಣ ಪ್ರಮಾಣದ ಪರಿಹಾರ ಸಿಗದ ಕಾರಣ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ರೈತರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಜಪ್ತಿ ಆದೇಶ ಹೊರಡಿಸಿದ್ದರಿಂದ, ನ್ಯಾಯಾಲಯದ ಅಧಿಕಾರಿಗಳು ಉಪವಿಭಾಗಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಸುಮಾರು 13 ಲಕ್ಷ ರೂಪಾಯಿ ಮೌಲ್ಯದ ಟಾಟಾ ಸುಮೋ ವಾಹನ ಹಾಗೂ 2.60 ಲಕ್ಷ ರೂಪಾಯಿ ಮೌಲ್ಯದ ಕಂಪ್ಯೂಟರ್ ಉಪಕರಣಗಳು ಸೇರಿದಂತೆ ಒಟ್ಟು 15.60 ಲಕ್ಷ ರೂಪಾಯಿ ಮೌಲ್ಯದ ಸರ್ಕಾರಿ ಸ್ವತ್ತನ್ನು ಜಪ್ತಿ ಮಾಡಿಕೊಂಡರು. ರೈತರ ಪರವಾಗಿ ವಕೀಲ ಟಿ.ಕೆ. ಸಂತೋಷ ವಾದ ಮಂಡಿಸಿದ್ದರು. ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಸ್ಟ್ಯಾನ್ಲಿ ಫಿಲೀಫ್, ವೈಭವ ಬೆಳಗಾಂವಕರ, ಚೇತನ ಹೆಡಗೆ ಹಾಗೂ ನ್ಯಾಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.

