ಕೃಷ್ಣಾ, ಘಟಪ್ರಭಾ ನದಿಗಳು ಅಪಾಯ ಮಟ್ಟ ಮೀರಿ ಹರಿವು: ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಭೀತಿ, ರಸ್ತೆ ಸಂಪರ್ಕ ಕಡಿತ

Spread the love

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿ ಹಾಗೂ ನೆರೆಯ ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ, ಕೃಷ್ಣಾ, ಘಟಪ್ರಭಾ ಸೇರಿದಂತೆ ಏಳು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದರಿಂದಾಗಿ ಅನೇಕ ಕಡೆಗಳಲ್ಲಿ ಕೆಳಮಟ್ಟದ ಸೇತುವೆ ಮತ್ತು ಬ್ಯಾರೇಜ್‌ಗಳು ಜಲಾವೃತಗೊಂಡಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ.

ಗೋಕಾಕ್‌ನಲ್ಲಿ ಪ್ರವಾಹದ ಅವಾಂತರ:
ಘಟಪ್ರಭಾ ನದಿಯ ಪ್ರವಾಹ ಮತ್ತಷ್ಟು ಹೆಚ್ಚಾಗಿದ್ದು, ಹಿಡಕಲ್ ಜಲಾಶಯದಿಂದ ಭಾರೀ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ. ಪರಿಣಾಮವಾಗಿ, ಗೋಕಾಕ್ ಪಟ್ಟಣದ ಕೆಲವು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ನಗರದ ಹೊರವಲಯದಲ್ಲಿರುವ ಲೊಳಸೂರ ಸೇತುವೆಯು ಮುಳುಗಡೆಯಾಗಿದ್ದು, ಸಂಪರ್ಕ ಸ್ಥಗಿತಗೊಂಡಿದೆ.

ಅಧಿಕಾರಿಗಳಿಂದ ಪರಿಶೀಲನೆ:
ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಲೊಳಸೂರ ಸೇತುವೆಗೆ ಭೇಟಿ ನೀಡಿದ್ದಾರೆ. ಘಟಪ್ರಭಾ ಮತ್ತು ಮಾರ್ಕಂಡೇಯ ನದಿಗಳ ಪ್ರವಾಹದಿಂದ ತೊಂದರೆಗೊಳಗಾದ ಗೋಕಾಕ್‌ನ ವಿವಿಧ ಪ್ರದೇಶಗಳ ಸುಮಾರು 200 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಮತ್ತು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ:
ಮಹಾರಾಷ್ಟ್ರದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಕೃಷ್ಣಾ ನದಿಗೆ ಸುಮಾರು 1.50 ಲಕ್ಷ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಇದು ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುವ ಆತಂಕ ಮೂಡಿಸಿದೆ. ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

Leave a Reply

Your email address will not be published. Required fields are marked *