
ಬಳ್ಳಾರಿ: ನಗರದ ಎಸ್.ಪಿ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣದ ಸಿದ್ಧತೆ ವೇಳೆ ನಡೆದ ಬ್ಯಾನರ್ ಹರಿದು ಹಾಕಿದ ಗಲಾಟೆ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಈ ಘಟನೆಗೆ ಸಂಬಂಧಿಸಿದಂತೆ ಗಂಗಾವತಿ ಶಾಸಕ ಜಿ. ಜನಾರ್ದನ ರೆಡ್ಡಿ ಹಾಗೂ ಮಾಜಿ ಸಚಿವ ಬಿ. ಶ್ರೀರಾಮುಲು ಸೇರಿದಂತೆ ಒಟ್ಟು 11 ಜನರ ವಿರುದ್ಧ ನಗರದ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಗಂಭೀರ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ:
ನಗರ ಶಾಸಕ ನಾರಾ ಭರತ್ ರೆಡ್ಡಿ ಅವರ ನೇತೃತ್ವದಲ್ಲಿ ಎಸ್.ಪಿ ವೃತ್ತದಲ್ಲಿ ಪ್ರತಿಷ್ಠಾಪಿಸಲಾದ ಮಹರ್ಷಿ ವಾಲ್ಮೀಕಿ ಪುತ್ಥಳಿಯ ಅನಾವರಣ ಕಾರ್ಯಕ್ರಮಕ್ಕೆ ಅದ್ದೂರಿ ಸಿದ್ಧತೆ ಕೈಗೊಳ್ಳಲಾಗಿತ್ತು. ಜನವರಿ 1ರಂದು ಸಂಜೆ 6:30ರಿಂದ 7:30ರ ನಡುವಿನ ವೇಳೆಯಲ್ಲಿ ಸಿರುಗುಪ್ಪ ರಸ್ತೆ ಪಕ್ಕದಲ್ಲಿ ಅಳವಡಿಸಲಾಗಿದ್ದ ಕಾರ್ಯಕ್ರಮದ ಬ್ಯಾನರ್‌ಗಳನ್ನು ಶಾಸಕ ಜಿ. ಜನಾರ್ದನ ರೆಡ್ಡಿ ಹಾಗೂ ಅವರ ಬೆಂಬಲಿಗರು ಕಿತ್ತು ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂದರ್ಭದಲ್ಲಿದ್ದ ಭರತ್ ರೆಡ್ಡಿ ಅವರ ಆಪ್ತ ಸತೀಶ್ ರೆಡ್ಡಿ ಅವರು ಬ್ಯಾನರ್ ತೆರವಿಗೆ ಆಕ್ಷೇಪ ವ್ಯಕ್ತಪಡಿಸಿದಾಗ ಮಾತಿನ ಚಕಮಕಿ ಉಂಟಾಗಿ, ಅದು ಗಲಾಟೆಯಾಗಿ ವಿಕೋಪಕ್ಕೆ ತಿರುಗಿದೆ ಎನ್ನಲಾಗಿದೆ.
ಮಾರಣಾಂತಿಕ ಹಲ್ಲೆ ಆರೋಪ:
ಉದ್ದೇಶಪೂರ್ವಕವಾಗಿ ಬ್ಯಾನರ್‌ಗಳನ್ನು ಹರಿದು ಹಾಕಿದಷ್ಟೇ ಅಲ್ಲದೆ, ಜನಾರ್ದನ ರೆಡ್ಡಿ ಹಾಗೂ ಅವರ ಬೆಂಬಲಿಗರು ಸತೀಶ್ ರೆಡ್ಡಿ ಮತ್ತು ಅವರ ಗನ್‌ಮ್ಯಾನ್ ಬಸವರಾಜ ಅವರ ಮೇಲೆ ಕೊಲೆ ಮಾಡುವ ಉದ್ದೇಶದಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಜಗಳ ಬಿಡಿಸಲು ಮುಂದಾದ ಪೊಲೀಸ್ ಸಿಬ್ಬಂದಿ ಶ್ರೀನಿವಾಸ್ ಅವರಿಗೂ ಈ ವೇಳೆ ಗಾಯಗಳಾಗಿವೆ ಎಂದು ತಿಳಿಸಲಾಗಿದೆ.
ದೂರು ದಾಖಲಾದವರ ಪಟ್ಟಿ:
ನಾರಾ ಭರತ್ ರೆಡ್ಡಿ ಅವರ ಆಪ್ತ ಚಾನಾಳ್ ಶೇಖರ್ ಅವರು ನೀಡಿದ ದೂರಿನ ಮೇರೆಗೆ ಈ ಕೆಳಗಿನವರ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ:
- ಜಿ. ಜನಾರ್ದನ ರೆಡ್ಡಿ (ಶಾಸಕರು, ಗಂಗಾವತಿ)
- ಜಿ. ಸೋಮಶೇಖರ ರೆಡ್ಡಿ (ಮಾಜಿ ಶಾಸಕರು)
- ಬಿ. ಶ್ರೀರಾಮುಲು (ಮಾಜಿ ಸಚಿವರು)
- ಮೋತ್ಕರ್ ಶ್ರೀನಿವಾಸ್ (ಪಾಲಿಕೆ ಸದಸ್ಯರು)
- ಮಾರುತಿ ಪ್ರಸಾದ್ (ಬುಡಾ ಮಾಜಿ ಅಧ್ಯಕ್ಷರು)
- ಅಲಿಖಾನ್ (ಜನಾರ್ದನ ರೆಡ್ಡಿ ಆಪ್ತ)
- ದಮ್ಮೂರು ಶೇಖರ್
- ಪ್ರಕಾಶ್ ರೆಡ್ಡಿ
- ರಮಣ
- ಪಾಲಣ್ಣ
- ದಿವಾಕರ್
ನಗರದ ಅಭಿವೃದ್ಧಿಯನ್ನು ಸಹಿಸಲಾಗದೆ ಈ ರೀತಿಯ ಕೃತ್ಯ ಎಸಗಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಸದ್ಯ ಬ್ರೂಸ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಈ ಘಟನೆಯಿಂದ ಬಳ್ಳಾರಿಯಲ್ಲಿ ರಾಜಕೀಯ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ.

