ಇನಾಂವೀರಾಪುರ ಗ್ರಾಮಕ್ಕೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಭೇಟಿಗ್ರಾಮಸ್ಥರೊಂದಿಗೆ ಚರ್ಚೆ, ಮುನ್ನೆಚ್ಚರಿಕಾ ಕ್ರಮಗಳಿಗೆ ಕಟ್ಟುನಿಟ್ಟಿನ ಸೂಚನೆ

Spread the love


ಹುಬ್ಬಳ್ಳಿ: ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಬುಧವಾರ ಸಂಜೆ ತಾಲ್ಲೂಕಿನ ಇನಾಂವೀರಾಪುರ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮದ ಸ್ಥಿತಿಗತಿಯನ್ನು ಕೂಲಂಕಷವಾಗಿ ವೀಕ್ಷಿಸಿದರು. ಶಾಸಕ ಎಂ.ಆರ್. ಪಾಟೀಲ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರೊಂದಿಗೆ ಗ್ರಾಮದಲ್ಲಿ ಸಂಚರಿಸಿದ ಜಿಲ್ಲಾಧಿಕಾರಿಗಳು, ಗ್ರಾಮಸ್ಥರೊಂದಿಗೆ ನೇರ ಸಂವಾದ ನಡೆಸಿದರು.

ಇತ್ತೀಚೆಗೆ ನಡೆದ ಮಾನ್ಯಾ ಕೊಲೆ ಪ್ರಕರಣದ ಘಟನೆಯ ಹಿನ್ನೆಲೆ, ಗ್ರಾಮದ ಪ್ರಸ್ತುತ ಸಾಮಾಜಿಕ ಪರಿಸ್ಥಿತಿ ಹಾಗೂ ಪೀಡಿತ ಕುಟುಂಬದ ಸ್ಥಿತಿಗತಿಗಳ ಕುರಿತು ಜಿಲ್ಲಾಧಿಕಾರಿಗಳು ಸಮಗ್ರ ಮಾಹಿತಿ ಪಡೆದುಕೊಂಡರು. ಸಾಮಾಜಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಅಹಿತಕರ ಘಟನೆಗಳು ಮುಂದಿನ ದಿನಗಳಲ್ಲಿ ಮರುಕಳಿಸದಂತೆ ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸುವುದು ಹಾಗೂ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಘಟನೆಯ ಕುರಿತು ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು, ಪ್ರಕರಣವನ್ನು ಪೊಲೀಸ್ ಇಲಾಖೆ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ತ್ವರಿತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ನಿಷ್ಪಕ್ಷಪಾತ ಹಾಗೂ ಗಂಭೀರ ತನಿಖೆ ಪ್ರಗತಿಯಲ್ಲಿದ್ದು, ನ್ಯಾಯ ಒದಗಿಸುವಲ್ಲಿ ಯಾವುದೇ ಲೋಪವಾಗುವುದಿಲ್ಲವೆಂದು ಭರವಸೆ ನೀಡಿದರು.

ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ಇನಾಂವೀರಾಪುರ ಗ್ರಾಮದಲ್ಲಿ ನಡೆದಿರುವ ಘಟನೆ ಅತ್ಯಂತ ನೋವಿನ ಸಂಗತಿಯಾಗಿದ್ದು, ಇಂತಹ ಅಪರಾಧಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. ಗ್ರಾಮದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಎಲ್ಲಾ ಇಲಾಖೆಗಳೊಂದಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಶುಭಾ ಪಿ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಡಾ. ಎಚ್.ಎಚ್. ಕುಕನೂರ, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮುರಗೇಶ ಚನ್ನಣ್ಣವರ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.


Leave a Reply

Your email address will not be published. Required fields are marked *