ರೋಗ ನಿಯಂತ್ರಣ ಮತ್ತು ಸದೃಢ ಆರೋಗ್ಯಕ್ಕಾಗಿ ಸಿರಿಧಾನ್ಯಗಳ ಸೇವನೆ ಅಗತ್ಯ: ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ

Spread the love


ಧಾರವಾಡ: ಸಿರಿಧಾನ್ಯಗಳು ಪೌಷ್ಟಿಕಾಂಶಗಳ ಗಣಿಯಾಗಿದ್ದು, ಹೃದಯ ಆರೋಗ್ಯ ಕಾಪಾಡುವಲ್ಲಿ, ಮಧುಮೇಹ ನಿಯಂತ್ರಣ ಹಾಗೂ ದೇಹದ ತೂಕವನ್ನು ಸಮತೋಲನದಲ್ಲಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ಸಾರ್ವಜನಿಕರು ತಮ್ಮ ದೈನಂದಿನ ಆಹಾರ ಕ್ರಮದಲ್ಲಿ ಸಿರಿಧಾನ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಅವರು ಹೇಳಿದರು.

ಮಂಗಳವಾರ ಬೆಳಿಗ್ಗೆ ಕೃಷಿ ಇಲಾಖೆಯಿಂದ ನಗರದ ಡಾ. ಮಲ್ಲಿಕಾರ್ಜುನ ಮನಸೂರ ಕಲಾಭವನದ ಆವರಣದಲ್ಲಿ ಆಯೋಜಿಸಲಾಗಿದ್ದ ‘ಸಿರಿಧಾನ್ಯಗಳ ಜಾಗೃತಿ ಜಾಥಾ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಿರಿಧಾನ್ಯಗಳ ಪ್ರಯೋಜನಗಳು ಹಾಗೂ ಬಳಕೆಯ ಕುರಿತು ವ್ಯಾಪಕ ಅರಿವು ಮೂಡಿಸುವ ಉದ್ದೇಶದಿಂದ ಈ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ನಮ್ಮ ಪೂರ್ವಜರು ಬಳಸುತ್ತಿದ್ದ ಸಜ್ಜೆ, ನವಣೆ, ಸಾವೆ, ರಾಗಿ, ಹಾರಕ, ಬರಗು, ಕೊರಲೆ ಹಾಗೂ ಊದಲು ಸೇರಿದಂತೆ ವಿವಿಧ ಸಿರಿಧಾನ್ಯಗಳಲ್ಲಿ ಹೇರಳವಾದ ನಾರಿನಂಶ ಮತ್ತು ಪೋಷಕಾಂಶಗಳು ಅಡಗಿದ್ದು, ಇವು ಇಂದಿನ ಆಧುನಿಕ ಜೀವನಶೈಲಿಯಿಂದ ಉಂಟಾಗುವ ಅನೇಕ ರೋಗಗಳಿಗೆ ಉತ್ತಮ ಮದ್ದಾಗಿವೆ ಎಂದು ಅವರು ವಿವರಿಸಿದರು.

ರೈತರ ದೃಷ್ಟಿಯಿಂದಲೂ ಸಿರಿಧಾನ್ಯಗಳು ವರದಾನವಾಗಿದ್ದು, ಕಡಿಮೆ ನೀರಿನ ಲಭ್ಯತೆ ಇರುವ ಸಾಮಾನ್ಯ ಫಲವತ್ತತೆಯ ಭೂಮಿಯಲ್ಲಿಯೇ ಹೆಚ್ಚಿನ ಖರ್ಚಿಲ್ಲದೆ ಇವುಗಳನ್ನು ಬೆಳೆಯಬಹುದಾಗಿದೆ. ಪ್ರಸ್ತುತ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಈ ಬೆಳೆಗಳು ಆರ್ಥಿಕ ಭದ್ರತೆ ಒದಗಿಸುತ್ತಿದ್ದು, ಸಿರಿಧಾನ್ಯಗಳ ಸಾಗುವಳಿ ವಿಸ್ತೀರ್ಣ ಹೆಚ್ಚಿಸುವುದು, ಗ್ರಾಹಕರಿಗೆ ಸುಲಭವಾಗಿ ಲಭ್ಯವಾಗುವಂತೆ ಸಂಸ್ಕರಣೆ ಹಾಗೂ ಮೌಲ್ಯವರ್ಧನೆಗೆ ಒತ್ತು ನೀಡುವುದು ಅತ್ಯಂತ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಿರಿಧಾನ್ಯಗಳ ಉತ್ಪಾದಕರು ಹಾಗೂ ಬಳಕೆದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಸಾಂಪ್ರದಾಯಿಕ ಆಹಾರದ ಭಾಗವಾಗಿರುವ ಈ ಧಾನ್ಯಗಳಿಂದ ಆಧುನಿಕ ರುಚಿಗೆ ತಕ್ಕಂತೆ ಹೊಸ ಖಾದ್ಯಗಳನ್ನು ತಯಾರಿಸಲು ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

‘ಬೆಳೆ ಉತ್ಪಾದನೆಯಾಚೆಗಿನ ಕೃಷಿ – ರೈತರ ಸಬಲೀಕರಣ’ ಎಂಬ ಧ್ಯೇಯವಾಕ್ಯದೊಂದಿಗೆ ನಡೆದ ಈ ಜಾಗೃತಿ ನಡಿಗೆಯು ಕಲಾಭವನದಿಂದ ಕೆ.ಸಿ.ಡಿ ವೃತ್ತದವರೆಗೆ ಸಂಚರಿಸಿ ಸಾರ್ವಜನಿಕರ ಗಮನ ಸೆಳೆಯಿತು.

ಈ ಜಾಥಾದಲ್ಲಿ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕಾಶಿನಾಥ ಭದ್ರಣ್ಣವರ, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಶ್ರೀಪಾದ ಕುಲಕರ್ಣಿ, ಉಪ ಕೃಷಿ ನಿರ್ದೇಶಕರಾದ ನಟರಾಜ ಟಿ.ಹೆಚ್. ಮತ್ತು ಸಂದೀಪ ಜಿ.ಆರ್. ಸೇರಿದಂತೆ ಕಲಘಟಗಿ, ಹುಬ್ಬಳ್ಳಿ, ಕುಂದಗೋಳ ಹಾಗೂ ನವಲಗುಂದ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು ಮತ್ತು ಕೃಷಿ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.


Leave a Reply

Your email address will not be published. Required fields are marked *