ಧಾರವಾಡ: ಹುಬ್ಬಳ್ಳಿ ನಗರದ ವಿವಿಧ ಬಡಾವಣೆಗಳ ರಸ್ತೆ ಬದಿಗಳಲ್ಲಿ ಹಾಗೂ ವಿವಿಧ ಸರ್ಕಾರಿ ಕಚೇರಿಗಳ ಆವರಣದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ನಿಂತಿರುವ ಒಟ್ಟು 57 ಮರಗಳು ಮತ್ತು 32 ಮರದ ಟೊಂಗೆಗಳನ್ನು ತೆರುವುಗೊಳಿಸಲು ಅರಣ್ಯ ಇಲಾಖೆ ಮುಂದಾಗಿದೆ. ಈ ಮರಗಳ ವಿಲೇವಾರಿಗಾಗಿ ಹುಬ್ಬಳ್ಳಿ ವಲಯ ಅರಣ್ಯ ಅಧಿಕಾರಿಗಳ ಕಚೇರಿಯಲ್ಲಿ ಡಿಸೆಂಬರ್ 30, 2025 ಮತ್ತು ಜನವರಿ 12, 2026 ರಂದು ಮಧ್ಯಾಹ್ನ 3 ಗಂಟೆಗೆ ಬಹಿರಂಗ ಹರಾಜನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗುತ್ತಿದ್ದು, ಹರಾಜು ಪ್ರಕ್ರಿಯೆಯು ಪಾರದರ್ಶಕವಾಗಿ ನಡೆಯಲಿದೆ.
ಮರ ಸಂರಕ್ಷಣಾ ಕಾಯ್ದೆ 1976ರ ಅಡಿಯಲ್ಲಿ ಈ ಮರಗಳನ್ನು ತೆರುವುಗೊಳಿಸುವ ಬಗ್ಗೆ ಯಾವುದೇ ಸಾರ್ವಜನಿಕರು ಅಥವಾ ಸಂಘ-ಸಂಸ್ಥೆಗಳು ತಕರಾರು ಹೊಂದಿದ್ದಲ್ಲಿ, ಅವರು ತಮ್ಮ ಆಕ್ಷೇಪಣೆಯನ್ನು ಲಿಖಿತ ರೂಪದಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ತಕರಾರು ಸಲ್ಲಿಸಬಯಸುವವರು ಡಿಸೆಂಬರ್ 26, 2025 ರ ಒಳಗಾಗಿ ಧಾರವಾಡ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಅಥವಾ ಧಾರವಾಡದ ಕೆ.ಸಿ. ಪಾರ್ಕ್ ಎದುರಿರುವ ಅರಣ್ಯ ಸಂಕೀರ್ಣದಲ್ಲಿರುವ ಮರ ಅಧಿಕಾರಿಯವರಿಗೆ ತಮ್ಮ ದೂರನ್ನು ಸಲ್ಲಿಸಬಹುದಾಗಿದೆ. ನಿಗದಿತ ದಿನಾಂಕದ ನಂತರ ಬರುವ ಯಾವುದೇ ತಕರಾರುಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

