
ಹುಬ್ಬಳ್ಳಿ: ನಗರದ ಹತ್ತಿಕಾಳಸಾಲ ರಸ್ತೆ (ಕವಿ ಗಂಗಪ್ಪ ವಾಲಿ ಮಾರ್ಗ) ಮತ್ತು ಸರಾಫ್ ಗಟ್ಟಿ ರಸ್ತೆಯನ್ನು ತಕ್ಷಣವೇ ದುರಸ್ತಿಗೊಳಿಸಬೇಕೆಂದು ಒತ್ತಾಯಿಸಿ ಸ್ಥಳೀಯ ವ್ಯಾಪಾರಸ್ಥರು ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೆ ಮನವಿ ಸಲ್ಲಿಸಿದರು. ಹುಬ್ಬಳ್ಳಿ ತಹಶೀಲ್ದಾರ್ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಕುಂದುಕೊರತೆ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಈ ಅರ್ಜಿ ನೀಡಲಾಯಿತು.
ಕಡಿಮೆ ಗುಣಮಟ್ಟದ ರಸ್ತೆಯಿಂದಾಗಿ ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರಸ್ತೆಯು ಹದಗೆಟ್ಟು ಗುಂಡಿಮಯವಾಗಿರುವುದರಿಂದ ವ್ಯಾಪಾರ-ವಹಿವಾಟಿಗೆ ತೊಂದರೆಯಾಗುತ್ತಿದೆ ಎಂದು ವ್ಯಾಪಾರಸ್ಥರು ತಮ್ಮ ಅಳಲನ್ನು ತೋಡಿಕೊಂಡರು. ಈ ರಸ್ತೆಯನ್ನು ಶೀಘ್ರವಾಗಿ ದುರಸ್ತಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಮನವಿಯಲ್ಲಿ ಕೋರಲಾಗಿದೆ.
ಈ ಸಂದರ್ಭದಲ್ಲಿ ಶಂಕರ ಮಿಸ್ಕಿನ, ವೀರಣ್ಣ ಹೂಲಿ, ಸುರೇಂದ್ರ ಕಾಂಬಳೆ, ಅನಿಲ್ ದಲಬಂಜನ, ಆನಂದ ಝಪಾಟೆ ಸೇರಿದಂತೆ ಹಲವು ವ್ಯಾಪಾರಸ್ಥರು ಉಪಸ್ಥಿತರಿದ್ದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರನ್ನು ಕೋರಲಾಗಿದೆ.

