
ಧಾರವಾಡ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿವಿಧ ಯೋಜನೆಗಳ ಅಡಿ ಬಿಡುಗಡೆಯಾಗಿರುವ ಅನುದಾನವು ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದೊಳಗೆ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಬೇಕು ಮತ್ತು ಯಾವುದೇ ಕಾರಣಕ್ಕೂ ಹಣ ಲ್ಯಾಪ್ಸ್ ಆಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನವೆಂಬರ್ ಅಂತ್ಯದವರೆಗಿನ ಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೃಷಿ ಮತ್ತು ಕೃಷಿ ಪೂರಕ ಇಲಾಖೆಗಳಾದ ತೋಟಗಾರಿಕೆ, ಮೀನುಗಾರಿಕೆ, ಪಶುಪಾಲನೆ ಹಾಗೂ ರೇಷ್ಮೆ ಇಲಾಖೆಗಳ ಫಲಾನುಭವಿಗಳ ಕುರಿತು ಪರಿಣಿತ ತಂಡಗಳಿಂದ ಸೋಷಿಯೋ ಎಕನಾಮಿಕ್ (ಸಾಮಾಜಿಕ-ಆರ್ಥಿಕ) ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಕೃಷಿ ಇಲಾಖೆಗೆ ನಿರ್ದೇಶಿಸಿದರು. ಈ ಅಧ್ಯಯನದ ಮೂಲಕ ಯೋಜನೆಗಳ ನೈಜ ಸುಧಾರಣೆ ಮತ್ತು ರೈತರ ಬೇಡಿಕೆಗಳನ್ನು ಅರಿಯಲು ಸಾಧ್ಯವಾಗಲಿದ್ದು, ಸಂಶೋಧಕರು ಮತ್ತು ಶೈಕ್ಷಣಿಕ ಪರಿಣಿತರನ್ನು ಬಳಸಿಕೊಂಡು ವಿಸೃತ ವರದಿ ಸಿದ್ಧಪಡಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಮಗಾರಿಗಳು ಕೇವಲ ಅಂಕಿ-ಅಂಶಗಳಿಗೆ ಸೀಮಿತವಾಗದೆ ಗುಣಮಟ್ಟದಿಂದ ಕೂಡಿರಬೇಕು ಮತ್ತು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳ್ಳಬೇಕು ಎಂದು ಒತ್ತಿ ಹೇಳಿದರು. ಒಂದು ವೇಳೆ ಅನುದಾನ ಬಳಕೆಯಾಗದೆ ವಾಪಸ್ ಹೋದರೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು. ರೈತರು ಕೇವಲ ಏಕಸ್ವಾಮ್ಯ ಬೆಳೆಗಳಿಗೆ ಅಂಟಿಕೊಳ್ಳದೆ ಬದಲೀ ಬೆಳೆ ಮತ್ತು ಮಿಶ್ರ ಬೆಳೆಗಳನ್ನು ಬೆಳೆಯುವಂತೆ ಅಧಿಕಾರಿಗಳು ಜಮೀನುಗಳಿಗೆ ಭೇಟಿ ನೀಡಿ ಮನವರಿಕೆ ಮಾಡಿಕೊಡಬೇಕು. ಸರ್ಕಾರವು ಕೇವಲ ಗುರಿ ಸಾಧನೆಗಾಗಿ ಅಧಿಕಾರಿಗಳನ್ನು ನೇಮಿಸಿಲ್ಲ, ಬದಲಾಗಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ರೈತರ ಬದುಕಿನಲ್ಲಿ ಆರ್ಥಿಕ ಕ್ರಾಂತಿ ಉಂಟುಮಾಡಲು ಕೆಲಸ ಮಾಡಬೇಕು ಎಂದು ತಿಳಿಸಿದರು. ಇದೇ ವೇಳೆ ಪಂಚಾಯತ್ ರಾಜ್ ಇಲಾಖೆಯ ಬಾಕಿ ಇರುವ 143 ಕಾಮಗಾರಿಗಳನ್ನು ತಕ್ಷಣವೇ ಮುಕ್ತಾಯಗೊಳಿಸಲು ಮತ್ತು ನರೇಗಾ ಯೋಜನೆಯಡಿ ಬಾಕಿ ಇರುವ ಕಾಮಗಾರಿಗಳನ್ನು ಜನವರಿ ಒಳಗಾಗಿ ಪೂರ್ಣಗೊಳಿಸಲು ಸೂಚಿಸಿದರು.
ಶೈಕ್ಷಣಿಕ ಪ್ರಗತಿಯ ಬಗ್ಗೆ ವಿಶೇಷ ಕಾಳಜಿ ವಹಿಸಿದ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಅವರು, ಈ ಬಾರಿ ಎಸ್.ಎಸ್.ಎಲ್.ಸಿ ಫಲಿತಾಂಶವು ಕಳೆದ ವರ್ಷಕ್ಕಿಂತ ಉತ್ತಮವಾಗಿರಬೇಕು ಎಂದು ಸೂಚಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ, ಸಮಾಜ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಲ್ಲಿ ಶೇ. ನೂರಕ್ಕೆ ನೂರರಷ್ಟು ಫಲಿತಾಂಶ ಬರಬೇಕು, ಇಲ್ಲವಾದಲ್ಲಿ ನಿಲಯಪಾಲಕರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಅವರಿಗೆ ಅಭ್ಯಾಸ ಹಾಳೆಗಳನ್ನು ನೀಡಿ ಪರೀಕ್ಷಾ ಆತ್ಮವಿಶ್ವಾಸ ಹೆಚ್ಚಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. ಜಿಲ್ಲಾ ಪಂಚಾಯತ್ ಸಿಇಒ ಭುವನೇಶ ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲಾ ಯೋಜನಾ ವರದಿ ಸಿದ್ಧಪಡಿಸುವಿಕೆ ಮತ್ತು ಜನವರಿ ಅಂತ್ಯದೊಳಗೆ ನಿಗದಿತ ಗುರಿ ಸಾಧಿಸುವ ಕುರಿತು ಸಭೆಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡು ಪ್ರಗತಿ ವರದಿ ಮಂಡಿಸಿದರು

