“ಆಕಳ ಹಾಲು ಅಮೃತಕ್ಕೆ ಸಮಾನ; ಹೊಟ್ಟೆಯಲ್ಲಿ ಹಚ್ಚೇರು ಬಂಗಾರ ಸತ್ಯ”: ಕಾಡಸಿದ್ದೇಶ್ವರ ಸ್ವಾಮೀಜಿ

Spread the love

ಹುಬ್ಬಳ್ಳಿ: ದೇಸಿ ಆಕಳ ಹಾಲು ಅಮೃತಕ್ಕೆ ಸಮಾನವಾಗಿದ್ದು, ಅದರ ಹಾಲು ಮತ್ತು ತುಪ್ಪವನ್ನು ಸೇವಿಸಿದರೆ ಮನುಷ್ಯ ಆರೋಗ್ಯವಂತನಾಗಿರುತ್ತಾನೆ ಎಂದು ಕೊಲ್ಲಾಪುರದ ಕಣ್ಣೇರಿ ಮಠದ ಶ್ರೀ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟಿದ್ದಾರೆ. ಜವಾರಿ ಆಕಳ ತುಪ್ಪದಲ್ಲಿ ಹೆಚ್ಚಿನ ಔಷಧಿ ಗುಣಗಳಿದ್ದು ಅನೇಕ ಕಾಯಿಲೆಗಳು ವಾಸಿಯಾಗುತ್ತವೆ. ಮಕ್ಕಳಿಗೆ ಕಿವಿ ನೋವು ಅಥವಾ ತಲೆನೋವು ಕಾಣಿಸಿಕೊಂಡಾಗ ಜವಾರಿ ಆಕಳ ತುಪ್ಪವನ್ನು ಎರಡು ಹನಿಗಳಂತೆ ನಾಲ್ಕು ದಿನ ಹಾಕಿದರೆ ಅವರು ನೋವಿನಿಂದ ಪಾರಾಗುತ್ತಾರೆ ಎಂದು ಸ್ವಾಮೀಜಿಗಳು ತಿಳಿಸಿದರು. ಆಕಳ ಹೊಟ್ಟೆಯಲ್ಲಿ ಹಚ್ಚೇರು ಬಂಗಾರ ಸತ್ಯ ಎಂದು ಅವರು ಹೇಳಿದರು.

ತಾಲೂಕಿನ ಮಂಟೂರು ಗ್ರಾಮದ ಶ್ರೀ ರಾಮಲಿಂಗೇಶ್ವರ ಮಹಾಸ್ವಾಮಿಗಳ 50ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದ ಬೆನ್ನೆಲುಬಾದ ರೈತರಿಗೆ ಕಷ್ಟಕಾಲ ಬಂದಾಗ ಸರ್ಕಾರವು ಹೆಚ್ಚಿನ ನೆರವು ನೀಡಲು ಮುಂದಾಗಬೇಕು. ರೈತರು ದುಡಿಯದಿದ್ದರೆ ನಮ್ಮ ಜೀವನಕ್ಕೆ ಆಹಾರ ಸಿಗುವುದಿಲ್ಲ. ಹೀಗಾಗಿ ರೈತನಿಗೆ ಸಂಕಷ್ಟ ಬಂದಾಗ ಸರ್ಕಾರ ಸಹಾಯ ಹಸ್ತ ಚಾಚಬೇಕಾಗಿದೆ ಎಂದು ಕಾಡಸಿದ್ದೇಶ್ವರ ಸ್ವಾಮೀಜಿ ಸರ್ಕಾರವನ್ನು ಆಗ್ರಹಿಸಿದರು. ಅಲ್ಲದೆ ಹೆತ್ತವರನ್ನು ಕಡೆಗಣಿಸದೆ ಅವರನ್ನು ಜೋಪಾನವಾಗಿ ನೋಡಿಕೊಳ್ಳುವುದು ಹೆತ್ತ ಮಕ್ಕಳ ಕರ್ತವ್ಯವಾಗಿದೆ ಎಂದು ಅವರು ಧರ್ಮೋಪದೇಶ ನೀಡಿದರು.

ಈ ಸಂದರ್ಭದಲ್ಲಿ ಕಲಬುರಗಿಯ ಶರಣಬಸವೇಶ್ವರ ಸ್ವಾಮಿಗಳ ಪುರಾಣವನ್ನು ವೀರೇಶ್ವರ ಶಾಸ್ತ್ರಿಗಳು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಶ್ರೀ ಮಹಾಂತಲಿಂಗ ಮಹಾಸ್ವಾಮಿಗಳು, ಶ್ರೀ ಶಂಕರ ರೋಡ್ ಮಹಾಸ್ವಾಮಿಗಳು, ಕುಂದಗೋಳದ ಶ್ರೀ ಬಸವೇಶ್ವರ ಶಿವಾನಂದ ಮಠದ ಸ್ವಾಮೀಜಿಗಳು, ಚಿಕ್ಕುಂಬಿಯ ಶ್ರೀ ನಾಗಲಿಂಗ ಸ್ವಾಮಿಗಳು ಹಾಗೂ ಹನುಮನಹಳ್ಳಿಯ ಶ್ರೀ ಶಿವ ಬಸವ ಮಹಾಸ್ವಾಮಿಗಳು ಸೇರಿದಂತೆ ಅನೇಕ ಮಠಾಧೀಶರು ಉಪಸ್ಥಿತರಿದ್ದರು.

ಈ ವೇಳೆ ಚೈತ್ರ ಶಿರೂರ, ಎಫ್‌ಎಂ ತೆಗ್ಗಿನಕೇರಿ, ಈರಣ್ಣ ಮಳಿಗಿ, ಬಸವರಾಜ ಯೋಗಪ್ಪನವರ, ಎಬಿ ಮಠದ ಗವಾಯಿಗಳು ಸೇರಿದಂತೆ ಅನೇಕ ಗ್ರಾಮದ ಭಕ್ತಾದಿಗಳು ಆಗಮಿಸಿ ಪೂಜ್ಯರ ಆಶೀರ್ವಾದ ಪಡೆದುಕೊಂಡರು. ನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಜರುಗಿತು.

Leave a Reply

Your email address will not be published. Required fields are marked *