
ರೋಗದ ಸಾಮ್ರಾಜ್ಯ ವರದಿಯಿಂದ ಎಚ್ಚೆತ್ತ ಜಿಲ್ಲಾಡಳಿತ; ನೂತನ ಹಾಸ್ಟೆಲ್ ಕಟ್ಟಡ ಶೀಘ್ರ ಪೂರ್ಣಗೊಳಿಸಲು ಎಲ್.ಟಿ. ಕಂಪನಿಗೆ ತಹಶೀಲ್ದಾರ್ ತಾಕೀತು
ಕುಂದಗೋಳ: ನವೆಂಬರ್ 26: ಪಟ್ಟಣದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿನ ಭೀಕರ ಅವ್ಯವಸ್ಥೆ, ಕಲುಷಿತ ನೀರಿನ ಪೂರೈಕೆ ಮತ್ತು ಸುಮಾರು 20 ವಿದ್ಯಾರ್ಥಿಗಳಿಗೆ ತಗುಲಿದ್ದ ಚರ್ಮರೋಗದ ಕುರಿತು ‘ಪಬ್ಲಿಕ್ ಸಮಾಚಾರ’ ವೆಬ್ ವಾಹಿನಿಯು “ಕುಂದಗೋಳ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ನಲ್ಲಿದೆ ರೋಗದ ಸಾಮ್ರಾಜ್ಯ” ಎಂಬ ಶೀರ್ಷಿಕೆಯಡಿ ಪ್ರಕಟಿಸಿದ ವರದಿಗೆ ತಕ್ಷಣ ಸ್ಪಂದನೆ ದೊರೆತಿದೆ. ವರದಿ ಪ್ರಕಟವಾದ ಬೆನ್ನಲ್ಲೇ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಎಚ್ಚೆತ್ತುಕೊಂಡು ಹಾಸ್ಟೆಲ್‌ಗೆ ತುರ್ತಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಧಾರವಾಡ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ. ಶುಭಾ ಅವರು ತಹಶೀಲ್ದಾರ್ ರಾಜು ಮಾವರಕರ ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕಮ್ಮಾರ್ ಅವರೊಂದಿಗೆ ಮೌನೇಶ್ವರ ಪ್ಲಾಟ್‌ನಲ್ಲಿರುವ ಹಾಸ್ಟೆಲ್‌ಗೆ ಭೇಟಿ ನೀಡಿ ಅವ್ಯವಸ್ಥೆಯನ್ನು ಖುದ್ದು ಪರಿಶೀಲಿಸಿದರು.
ಮಕ್ಕಳ ಆರೋಗ್ಯ ತಪಾಸಣೆ ಮತ್ತು ಕಟ್ಟಡ ಕಾಮಗಾರಿಗೆ ಗಡುವು:
ವರದಿಯಲ್ಲಿ ಉಲ್ಲೇಖಿಸಲಾದ 55 ಮಕ್ಕಳ ಪೈಕಿ ಸುಮಾರು 20 ಮಕ್ಕಳಿಗೆ ಕಾಣಿಸಿಕೊಂಡಿದ್ದ ಚರ್ಮ ರೋಗದ ಸಮಸ್ಯೆಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದರು. ತಕ್ಷಣವೇ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಜೇಂದ್ರ ಗೊಡ್ಡೆಮ್ಮಿಯವರ ನೇತೃತ್ವದಲ್ಲಿ ವೈದ್ಯಾಧಿಕಾರಿಗಳ ತಂಡ ಹಾಸ್ಟೆಲ್‌ಗೆ ಧಾವಿಸಿತು. ತಂಡವು ವಿದ್ಯಾರ್ಥಿಗಳ ಸಮಗ್ರ ಕುಶಲೋಪರಿಯನ್ನು ವಿಚಾರಿಸಿ, ಆರೋಗ್ಯ ತಪಾಸಣೆ ನಡೆಸಿತು. ಹಾಸ್ಟೆಲ್‌ನಲ್ಲೇ ಚರ್ಮರೋಗ ತಜ್ಞರನ್ನು ಕರೆಸಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ, ಚಿಕಿತ್ಸೆ ನೀಡಿ ಔಷಧೋಪಚಾರ ಮಾಡಲು ತಾಲ್ಲೂಕು ಆಸ್ಪತ್ರೆಯ ಆರೋಗ್ಯ ಅಧಿಕಾರಿಯವರು ಆರಂಭಿಸಿದ್ದಾರೆ.
ಜಂಟಿ ನಿರ್ದೇಶಕಿ ಪಿ. ಶುಭಾ ಅವರು ಶೌಚಾಲಯ, ಸ್ನಾನಗೃಹದ ಅವ್ಯವಸ್ಥೆ ಮತ್ತು ಆಹಾರ ಪೂರೈಕೆಯ ದುಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಿದರು. ಹಾಸ್ಟೆಲ್‌ನ ಸುಧಾರಣೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಮತ್ತು ಇಂತಹ ನಿರ್ಲಕ್ಷ್ಯ ಪುನರಾವರ್ತನೆಯಾಗದಂತೆ ವಾರ್ಡನ್‌ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ, ತಹಶೀಲ್ದಾರ್ ರಾಜು ಮಾವರಕರ ಅವರು ಎಲ್.ಟಿ. ಕಂಪನಿಯ ಅಧಿಕಾರಿಗಳಿಗೆ ಗಂಭೀರ ಎಚ್ಚರಿಕೆ ನೀಡಿದರು. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸಮಸ್ಯೆಗಳಾಗಿದ್ದು, ನೂತನ ಕಟ್ಟಡ ಕಟ್ಟಲು ಸಮಯ ಮತ್ತು ಅವಕಾಶದ ಕಾಲ ಹರಣ ಮಾಡದೆ, ಇನ್ನು ಒಂದು ವಾರದೊಳಗೆ ಪ್ರಗತಿಯಲ್ಲಿರುವ ಕಾಮಗಾರಿಯನ್ನು ಬೇಗನೆ ಮುಗಿಸಿ, ಕಟ್ಟಡವನ್ನು ಸಿದ್ಧಪಡಿಸಿ ಕೊಡಬೇಕು ಎಂದು ತಾಖೀತು ಮಾಡಿದರು.
ಮೂಲ ಸೌಕರ್ಯಗಳ ಇತ್ಯರ್ಥಕ್ಕೆ ಭರವಸೆ:
ಕಲುಷಿತ ನೀರು, ನಾರುತ್ತಿರುವ ಶೌಚಗೃಹದ ಸೆಪ್ಟಿಕ್ ಟ್ಯಾಂಕ್, ಕೆಟ್ಟು ನಿಂತ ಫ್ಯಾನ್‌ಗಳು ಮತ್ತು ಗುಣಮಟ್ಟವಿಲ್ಲದ ಆಹಾರದ ಕುರಿತು ಪಾಲಕರು ಮತ್ತು ವಿದ್ಯಾರ್ಥಿಗಳು ವ್ಯಕ್ತಪಡಿಸಿದ್ದ ಆತಂಕವನ್ನು ಅಧಿಕಾರಿಗಳು ಮನಗಂಡಿದ್ದಾರೆ. ಸಹಾಯಕ ನಿರ್ದೇಶಕಿ ಮೀನಾಕ್ಷಿ ಗುದಗಿ ಅವರು, ಹಾಸ್ಟೆಲ್‌ನ ಮೂಲ ಸೌಕರ್ಯಗಳ ಸಮಸ್ಯೆಗಳನ್ನು ಶೀಘ್ರದಲ್ಲಿಯೇ ಇತ್ಯರ್ಥಪಡಿಸಿ, ವಿದ್ಯಾರ್ಥಿಗಳಿಗೆ ಸುರಕ್ಷಿತ ವಾತಾವರಣ ಮತ್ತು ಉತ್ತಮ ಆಹಾರ ಸಿಗುವಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
’ಪಬ್ಲಿಕ್ ಸಮಾಚಾರ’ ವೆಬ್ ಸುದ್ದಿ ವಾಹಿನಿಯ ಸಮಯೋಚಿತ ಮತ್ತು ಪ್ರಭಾವಶಾಲಿ ವರದಿಯ ಪರಿಣಾಮದಿಂದಾಗಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ಆರೋಗ್ಯ ಮತ್ತು ಮೂಲ ಸೌಕರ್ಯಗಳ ಸಮಸ್ಯೆ ಇತ್ಯರ್ಥವಾಗುವ ಶುಭ ಕಾಲ ಒದಗಿ ಬಂದಿದೆ.

