
ಧಾರವಾಡ ನ.21: ಕರ್ನಾಟಕ ರಾಜ್ಯದ ಸಮೃದ್ಧ ಪ್ರಾಚೀನ ಸ್ಮಾರಕಗಳ ಮೂರ್ತ ಮತ್ತು ಅಮೂರ್ತ ಪರಂಪರೆಯ ಬಗ್ಗೆ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ‘ಪ್ರಾಚ್ಯ ಪ್ರಜ್ಞೆ’ ಸ್ಪರ್ಧೆಗಳಲ್ಲಿ ಧಾರವಾಡ ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಜಿಲ್ಲೆಯ ಒಟ್ಟು 13 ವಿದ್ಯಾರ್ಥಿಗಳು ಇದೀಗ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.
ರಾಜ್ಯಮಟ್ಟದ ಪ್ರಾಚ್ಯ ಪ್ರಜ್ಞೆ ಸ್ಪರ್ಧೆಗಳು ನವೆಂಬರ್ 25, 2025 ರಂದು ಗದಗ ಜಿಲ್ಲೆಯ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ವಿಶ್ವವಿದ್ಯಾಲಯದ ಗ್ರಾಮ ಗಂಗೋತ್ರಿ ಆವರಣದಲ್ಲಿ ಜರುಗಲಿವೆ. ಜಿಲ್ಲೆಯನ್ನು ಪ್ರತಿನಿಧಿಸುವ ಈ ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಹಾಗೂ ಜಿಲ್ಲಾ ಪ್ರಾಚ್ಯ ಪ್ರಜ್ಞೆ ಸ್ಪರ್ಧೆಗಳ ನೋಡಲ್ರವರಾದ ಡಾ.ರೇಣುಕಾ ಅಮಲಝರಿ ಅವರು ಅಭಿನಂದಿಸಿದ್ದಾರೆ.
🏆 ವಿಜೇತ ವಿದ್ಯಾರ್ಥಿಗಳ ವಿವರ
ಪ್ರಬಂಧ ಸ್ಪರ್ಧೆಯಲ್ಲಿ ಅಂಚಟಗೇರಿಯ ಅಲ್ಪಸಂಖ್ಯಾತರ ಮೂರಾರ್ಜಿ ದೇಸಾಯಿ ವಸತಿ ಶಾಲೆಯ ಏಕತಾ ದೊಡಮನಿ ಪ್ರಥಮ ಸ್ಥಾನ, ಇಟ್ಟಿಗಟ್ಟಿಯ ಸರ್ಕಾರಿ ಪ್ರೌಢಶಾಲೆಯ ಸುವರ್ಣಾ ಗಾಯಕವಾಡ ದ್ವಿತೀಯ ಸ್ಥಾನ ಹಾಗೂ ನವಲಗುಂದದ ಎನ್.ಇ.ಬಿ ಬಾಲಕಿಯರ ಪ್ರೌಢಶಾಲೆಯ ವಿನೂತಾ ತಳವಾರ ತೃತೀಯ ಸ್ಥಾನ ಗಳಿಸಿದ್ದಾರೆ. ಭಾಷಣ ಸ್ಪರ್ಧೆಯಲ್ಲಿ ಧಾರವಾಡದ ಪ್ರಜೆಂಟೇಷನ್ ಬಾಲಕಿಯರ ಪ್ರೌಢಶಾಲೆಯ ಸಹನಾ ಮುನವಳ್ಳಿ ಪ್ರಥಮ ಸ್ಥಾನ ಪಡೆದರೆ, ಅಂಚಟಗೇರಿಯ ಅರ್ಪಿತಾ ನಾಯ್ಕರ ದ್ವಿತೀಯ ಸ್ಥಾನ ಮತ್ತು ಧಾರವಾಡದ ಕೆ.ಎನ್.ಕೆ ಬಾಲಕಿಯರ ವಸತಿ ಶಾಲೆಯ ಸೃಷ್ಟಿ ಹೊನ್ನಿಕೇರಿ ತೃತೀಯ ಸ್ಥಾನ ಗಳಿಸಿದ್ದಾರೆ.
ಚಿತ್ರಕಲಾ ಸ್ಪರ್ಧೆ ವಿಭಾಗದಲ್ಲಿ ಹುಬ್ಬಳ್ಳಿಯ ಕಾನ್ವೆಂಟ್ ಹೈಸ್ಕೂಲ್ ಕೇಶ್ವಾಪೂರದ ಸುಖದಾ ಮುರಗೋಡ ಅವರಿಗೆ ಪ್ರಥಮ, ನರೇಂದ್ರದ ಸರ್ಕಾರಿ ಪ್ರೌಢಶಾಲೆಯ ಚಂದನಾ ಅಕ್ಕಿ ಅವರಿಗೆ ದ್ವಿತೀಯ ಹಾಗೂ ಧಾರವಾಡದ ಗೋಕಾಕ ಆರ್.ಎಲ್.ಎಸ್. ಪ್ರೌಢಶಾಲೆಯ ಮಹಮ್ಮದ್ ಫರಹಾನ ಅವರಿಗೆ ತೃತೀಯ ಸ್ಥಾನ ಲಭಿಸಿದೆ. ರಸಪ್ರಶ್ನೆ ಸ್ಪರ್ಧೆಯಲ್ಲಿ ಗುಡಿಸಾಗರದ ಸರ್ಕಾರಿ ಪ್ರೌಢಶಾಲೆಯ ರೇಣುಕಾ ಗುದಗಿ ಮತ್ತು ಪವಿತ್ರಾ ಜೋಗಿ ಅವರು ಪ್ರಥಮ ಸ್ಥಾನ ಗಳಿಸಿದ್ದರೆ, ಪ್ರಿಯಾ ಬೆಳಗಲಿ ಮತ್ತು ಸುಸ್ಮಿತಾ ಹೆಬ್ಬಾಳಕರ ಅವರು ದ್ವಿತೀಯ ಸ್ಥಾನ ಗಳಿಸಿದ್ದಾರೆ. ಈ ವಿಜೇತರೆಲ್ಲರೂ ರಾಜ್ಯಮಟ್ಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.

