ದುರ್ಬಲ ಕಟ್ಟಡಗಳ ಸಮೀಕ್ಷೆ ನಡೆಸಿ ಭದ್ರಪಡಿಸುವ ಕೆಲಸವಾಗಲಿ – ಡಿಸಿಎಂ ಡಿ.ಕೆ. ಶಿವಕುಮಾರ್

Spread the love

ದುರ್ಬಲ ಕಟ್ಟಡಗಳ ಸಮೀಕ್ಷೆ ನಡೆಸಿ ಭದ್ರಪಡಿಸುವ ಕೆಲಸವಾಗಲಿ – ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಮತ್ತು ದುರ್ಬಲಗೊಂಡಿರುವ ಕಟ್ಟಡಗಳನ್ನು ಮೊದಲು ಭದ್ರಪಡಿಸುವ ಕೆಲಸವಾಗಬೇಕು. ಇಂತಹ ಕಟ್ಟಡಗಳನ್ನು ಗುರುತಿಸಿ ಮಾಲೀಕರಿಗೆ ನೋಟಿಸ್ ನೀಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಬೆಂಕಿ ಅವಘಡ ಸ್ಥಳಕ್ಕೆ ಡಿಸಿಎಂ ಭೇಟಿ
ಧರ್ಮರಾಯಸ್ವಾಮಿ ದೇವಾಲಯದ ಬಳಿಯ ನಗರ್ತಪೇಟೆಯಲ್ಲಿ ಬೆಂಕಿ ಅವಘಡದಿಂದ ಹಾನಿಗೊಳಗಾದ ಸ್ಥಳಕ್ಕೆ ಭಾನುವಾರ ಭೇಟಿ ನೀಡಿದ ಡಿಸಿಎಂ ಶಿವಕುಮಾರ್ ಅವರು, ಘಟನಾ ಸ್ಥಳವನ್ನು ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
“ಎರಡು, ಮೂರು ಮಹಡಿಗಳನ್ನು ಕಟ್ಟಬೇಕಿದ್ದ ಜಾಗದಲ್ಲಿ ಎಂಟು-ಹತ್ತು ಮಹಡಿಗಳನ್ನು ನಿರ್ಮಿಸಲಾಗಿದೆ. ಇಂತಹ ಅನೇಕ ಕಟ್ಟಡಗಳು ವಾಸಕ್ಕೆ ಯೋಗ್ಯವಿಲ್ಲದಂತಾಗಿವೆ. ಇವುಗಳನ್ನು ಕೆಡವಿ ಹಾಕುವುದು ನಂತರದ ವಿಚಾರ, ಆದರೆ ಮೊದಲು ಸಮೀಕ್ಷೆ ನಡೆಸುವುದು ಅತಿ ಮುಖ್ಯ. ಈ ಕಾರ್ಯಕ್ಕೆ ವರ್ಷಗಟ್ಟಲೆ ಸಮಯ ಹಿಡಿಯಲಿದೆ” ಎಂದು ಅವರು ತಿಳಿಸಿದರು.
ಅಗ್ನಿಶಾಮಕ ನಿಯಮಗಳನ್ನು ಪಾಲಿಸದೆ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಒಂದು ವೇಳೆ ಬೆಂಕಿ ಅವಘಡ ಸಂಭವಿಸಿದರೆ ಜನರು ಓಡಿಹೋಗಲೂ ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ಹೀಗಾಗಿ ಇಂತಹ ಕಟ್ಟಡಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಮೃತರಿಗೆ ತಲಾ ₹5 ಲಕ್ಷ ಪರಿಹಾರ
“ನಿರ್ಲಕ್ಷ್ಯ ವಹಿಸಿರುವ ಕಟ್ಟಡ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಮತ್ತು ಅವರನ್ನು ಬಂಧಿಸಲಾಗಿದೆ. ಸೂಕ್ತ ಕಾನೂನು ಕ್ರಮ ಜರುಗಿಸಲು ಪೊಲೀಸರಿಗೆ ಮುಕ್ತ ಅವಕಾಶ ನೀಡಲಾಗಿದೆ” ಎಂದು ಡಿಸಿಎಂ ತಿಳಿಸಿದರು. ಅವಘಡದಲ್ಲಿ ಮೃತಪಟ್ಟ ಪ್ರತಿ ವ್ಯಕ್ತಿಯ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದರು.
ಕಟ್ಟಡ ಮಾಲೀಕರು ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಇಲ್ಲವಾದರೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಭವಿಷ್ಯದಲ್ಲಿ ಅವೈಜ್ಞಾನಿಕ ಕಟ್ಟಡ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಶೇ.70ರಷ್ಟು ಕಟ್ಟಡಗಳು ಅಕ್ರಮ: ಡಿಸಿಎಂ
ನಗರದಲ್ಲಿ ಶೇ.70ರಷ್ಟು ಕಟ್ಟಡ ನಿರ್ಮಾಣಗಳು ಅಕ್ರಮವಾಗಿವೆ ಎಂದು ಡಿಸಿಎಂ ಶಿವಕುಮಾರ್ ಒಪ್ಪಿಕೊಂಡರು. ಬಿಡಿಎ ಲೇಔಟ್‌ಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಮಹಡಿಗಳನ್ನು ನಿರ್ಮಿಸಲಾಗುತ್ತಿದೆ. ಸುಪ್ರೀಂ ಕೋರ್ಟ್ ತೀರ್ಪಿನಂತೆ ವಾಸಯೋಗ್ಯ ಪ್ರಮಾಣಪತ್ರ ಇಲ್ಲದೇ ನೀರು ಮತ್ತು ವಿದ್ಯುತ್ ಸಂಪರ್ಕ ನೀಡಬಾರದು ಎಂದು ಸೂಚಿಸಲಾಗಿದ್ದು, ಈ ಕಾರಣಕ್ಕೆ ಈಗಾಗಲೇ 4 ಲಕ್ಷ ಸಂಪರ್ಕಗಳನ್ನು ಸ್ಥಗಿತಗೊಳಿಸಲಾಗಿದೆ. 30×40 ಅಳತೆಯ ಎರಡು ಮಹಡಿಗಳ ಕಟ್ಟಡಗಳಿಗೆ ವಿನಾಯಿತಿ ನೀಡುವ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ತಿಳಿಸಿದರು.
“ನಗರ್ತಪೇಟೆಯಂತಹ ಪ್ರದೇಶಗಳು ಹೆಸರಿಗೆ ಮಾತ್ರ ವಸತಿ ಪ್ರದೇಶಗಳಾಗಿದ್ದು, ವಾಸ್ತವದಲ್ಲಿ ವ್ಯಾಪಾರ ಕೇಂದ್ರಗಳಾಗಿ ಬದಲಾಗಿವೆ. ಈ ಘಟನೆಯಲ್ಲಿ ಮೃತಪಟ್ಟವರು ರಾಜಸ್ಥಾನ ಮೂಲದವರಾಗಿದ್ದು, ಬದುಕು ಕಟ್ಟಿಕೊಳ್ಳಲು ಇಲ್ಲಿಗೆ ಬಂದಿದ್ದರು. ಇಂತಹ ದುರಂತಗಳು ಮತ್ತೆ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು” ಎಂದರು.
“ಧರ್ಮಸ್ಥಳ ಬಿಜೆಪಿಯವರ ಮನೆ ಆಸ್ತಿಯಲ್ಲ”
ಬಿಜೆಪಿ ಮುಖಂಡರು ‘ಧರ್ಮಸ್ಥಳ ಚಲೋ’ ಯಾತ್ರೆ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ, “ಅದು ರಾಜಕೀಯ ಯಾತ್ರೆಯೇ ಹೊರತು ಧಾರ್ಮಿಕ ಯಾತ್ರೆಯಲ್ಲ. ಧರ್ಮಸ್ಥಳವು ಬಿಜೆಪಿಯವರ ಮನೆ ಆಸ್ತಿಯಲ್ಲ, ಅದು ಸಾರ್ವಜನಿಕರ ಸ್ವತ್ತು” ಎಂದು ತಿರುಗೇಟು ನೀಡಿದರು.

Leave a Reply

Your email address will not be published. Required fields are marked *