
ಮಾಹಿತಿ ಹಕ್ಕು ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಿ: ಅಧಿಕಾರಿಗಳಿಗೆ ರಾಜ್ಯ ಮಾಹಿತಿ ಆಯೋಗದ ಕಟ್ಟುನಿಟ್ಟಿನ ಸೂಚನೆ
ರಾಯಚೂರು: ಮಾಹಿತಿ ಹಕ್ಕು ಕಾಯಿದೆಯಡಿ ಸಲ್ಲಿಕೆಯಾಗುವ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸದೆ, ನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು ಎಂದು ರಾಜ್ಯ ಮಾಹಿತಿ ಆಯೋಗದ ಪೀಠ ಸಂಖ್ಯೆ-4ರ ಆಯುಕ್ತ ರುದ್ರಣ್ಣ ಹರ್ತಿಕೋಟಿ ಮತ್ತು ಪೀಠ ಸಂಖ್ಯೆ-5ರ ಆಯುಕ್ತ ರಾಜಶೇಖರ್ ಅವರು ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ (ಪಿಐಒ) ಮತ್ತು ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಆಯುಕ್ತ ರುದ್ರಣ್ಣ ಹರ್ತಿಕೋಟಿ, "ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ 30 ದಿನಗಳೊಳಗೆ ಮಾಹಿತಿ ನೀಡದಿದ್ದರೆ, ಅದನ್ನು ಅರ್ಜಿದಾರರಿಗೆ ಉಚಿತವಾಗಿ ನೀಡಬೇಕಾಗುತ್ತದೆ. ಇದು ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತದೆ. ಆದ್ದರಿಂದ ಲಭ್ಯವಿರುವ ಮಾಹಿತಿಯನ್ನು ಕೂಡಲೇ ಒದಗಿಸಬೇಕು" ಎಂದು ಹೇಳಿದರು.
ಅರ್ಜಿಗಳಿಗೆ ಕಾಲಮಿತಿಯಲ್ಲಿ ಉತ್ತರ ನೀಡಿದರೆ ಬ್ಲಾಕ್ಮೇಲರ್ಗಳಿಗೆ ಅವಕಾಶ ಸಿಗುವುದಿಲ್ಲ. ಯಾವುದೇ ಅರ್ಜಿಯ ಬಗ್ಗೆ ಉದಾಸೀನ ಮಾಡಬಾರದು. ಅನೇಕ ಪಿಐಒಗಳು ನಿಯಮಗಳನ್ನು ಸರಿಯಾಗಿ ಓದುತ್ತಿಲ್ಲ, ಇದು ಸರಿಯಾದ ಕ್ರಮವಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
ಮಾಹಿತಿ ಒದಗಿಸಲು ವಿಳಂಬ ಮಾಡಿದರೆ ದಂಡ ವಿಧಿಸಲು ಕಾಯಿದೆಯಲ್ಲಿ ಅವಕಾಶವಿದೆ. ಒಂದು ದಿನಕ್ಕೆ ₹250 ರಂತೆ 100 ದಿನಗಳವರೆಗೆ ದಂಡ ವಿಧಿಸಬಹುದು. ಮಾಹಿತಿ ಒದಗಿಸಲು ವಿಳಂಬವಾಗಿರುವುದು ಸಾಬೀತಾದರೆ ಕನಿಷ್ಠ ₹25,000 ವರೆಗೂ ದಂಡ ವಿಧಿಸಲಾಗುತ್ತದೆ. ಈ ದಂಡದ ಮೊತ್ತವನ್ನು ಸಂಬಂಧಪಟ್ಟ ಅಧಿಕಾರಿಯ ಸಂಬಳದಿಂದ ಕಡಿತಗೊಳಿಸಲಾಗುತ್ತದೆ ಮತ್ತು ಈ ಮಾಹಿತಿಯು ಅವರ ಸೇವಾ ಪುಸ್ತಕದಲ್ಲಿ ದಾಖಲಾಗುತ್ತದೆ. ಇದರಿಂದ ನಿವೃತ್ತಿ ಸಮಯದಲ್ಲಿ ಪಿಂಚಣಿ ಸೌಲಭ್ಯಗಳಿಗೆ ಸಮಸ್ಯೆ ಉಂಟಾಗಬಹುದು ಎಂದು ಅವರು ಎಚ್ಚರಿಸಿದರು.
ಪೀಠ ಸಂಖ್ಯೆ-5ರ ರಾಜ್ಯ ಮಾಹಿತಿ ಆಯುಕ್ತ ರಾಜಶೇಖರ್ ಅವರು ಮಾತನಾಡಿ, “ಮಾಹಿತಿ ಹಕ್ಕು ಅರ್ಜಿ ಸ್ವೀಕೃತಿಯಾದ ಕೂಡಲೇ ನಿಯಮಾನುಸಾರ ವಿಲೇವಾರಿ ಮಾಡಲು ಕ್ರಮವಹಿಸಬೇಕು. ಮಾಹಿತಿ ಲಭ್ಯವಿಲ್ಲದಿದ್ದಲ್ಲಿ ಅದಕ್ಕೆ ಸೂಕ್ತ ಹಿಂಬರಹ ನೀಡಬೇಕು. ಪ್ರಥಮ ಮೇಲ್ಮನವಿ ಅರ್ಜಿಗಳ ವಿಚಾರಣೆಯನ್ನು ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳು ನಿಯಮಬದ್ಧವಾಗಿ ನಡೆಸಿದರೆ ಸಮಸ್ಯೆಗಳು ಹೆಚ್ಚುವುದಿಲ್ಲ” ಎಂದು ಹೇಳಿದರು. ಅನೇಕ ಕಡೆಗಳಲ್ಲಿ ಪ್ರಥಮ ಮೇಲ್ಮನವಿ ವಿಚಾರಣೆಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಸೇರಿದಂತೆ ವಿವಿಧ ಇಲಾಖೆಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳು ಉಪಸ್ಥಿತರಿದ್ದರು.

