
ಧಾರವಾಡ :ತಾಲೂಕಿನ ಮುಮ್ಮಿಗಟ್ಟಿ ಕ್ರಾಸ್‌ನಿಂದ ಗರಗ ಮಾರ್ಗವಾಗಿ ಬೈಲಹೊಂಗಲಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಈ ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಸಾಮಾಜಿಕ ಹೋರಾಟಗಾರ ಹಾಗೂ ತಡಕೋಡ ಗ್ರಾಮ ಪಂಚಾಯತ್ ಸದಸ್ಯ ಭೀಮಪ್ಪ ಯ. ಕಾಸಾಯಿ ಅವರು ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಕೆಲಸ ಆರಂಭಿಸದೇ ಇದ್ದಲ್ಲಿ ರಸ್ತೆ ತಡೆದು ಉಗ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರಿಗೆ ಮನವಿ ಸಲ್ಲಿಸಿದ ಭೀಮಪ್ಪ ಕಾಸಾಯಿ ಅವರು, “ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಮುಮ್ಮಿಗಟ್ಟಿ ಕ್ರಾಸ್‌ನಿಂದ ಬೈಲಹೊಂಗಲ ಸೇರಿದಂತೆ ಅನೇಕ ಸ್ಥಳಗಳಿಗೆ ಸಂಚರಿಸುವ ಈ ಪ್ರಮುಖ ರಸ್ತೆ ಮೂರು ವರ್ಷಗಳಿಂದ ಸಂಪೂರ್ಣ ಹಾಳಾಗಿದೆ,” ಎಂದು ಹೇಳಿದ್ದಾರೆ. ಈ ಮಾರ್ಗದಲ್ಲಿ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡುವ ಸಾವಿರಾರು ಕಾರ್ಮಿಕರು ಮತ್ತು ಅನೇಕ ವಾಹನಗಳು ಪ್ರತಿನಿತ್ಯ ಸಂಚರಿಸುತ್ತಿದ್ದು, ರಸ್ತೆ ಹದಗೆಟ್ಟಿರುವುದರಿಂದ ಅನೇಕ ಅಪಘಾತಗಳು ಸಂಭವಿಸಿದವು ಎಂದು ಅವರು ತಿಳಿಸಿದ್ದಾರೆ.
ಅವರು ಮುಂದುವರಿಸಿ, “ಈ ರೀತಿ ಸಾವು–ನೋವುಗಳಿಗೆ ಗುತ್ತಿಗೆದಾರರು ಮತ್ತು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಸ್ಥಳೀಯ ಜನರು ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ,” ಎಂದು ಆರೋಪಿಸಿದರು. ಆದ್ದರಿಂದ ಲೋಕೋಪಯೋಗಿ ಇಲಾಖೆಯು ತಕ್ಷಣವೇ ರಸ್ತೆ ದುರಸ್ತಿ ಕಾಮಗಾರಿಯನ್ನು ಆರಂಭಿಸಬೇಕೆಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಭೀಮಪ್ಪ ಕಾಸಾಯಿ ಮತ್ತು ಸತೀಶ್ ಪಾಟೀಲ್ ಅವರು ಇಲಾಖೆಯ ಮ್ಯಾನೇಜರ್ ಶ್ರೀಮತಿ ಕೀರ್ತಿವತಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. “ಕಾಮಗಾರಿ ಪ್ರಾರಂಭಿಸದಿದ್ದರೆ ರಸ್ತೆ ತಡೆದು ಉಗ್ರ ಹೋರಾಟಕ್ಕೆ ಇಳಿಯುವುದು ಅನಿವಾರ್ಯ,” ಎಂದು ಕಾಸಾಯಿ ಎಚ್ಚರಿಕೆ ನೀಡಿದರು.

