ಕೂಡ್ಲಿಗಿಯಲ್ಲಿ ₹870 ಕೋಟಿಯ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ

Spread the love

ಕೂಡ್ಲಿಗಿ (ವಿಜಯನಗರ): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ವಿಜಯನಗರ ಜಿಲ್ಲೆಯ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ₹870 ಕೋಟಿ ವೆಚ್ಚದ 74 ಕೆರೆಗಳಿಗೆ ನೀರು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿದರು.

ಮುಖ್ಯಮಂತ್ರಿಗಳು ಮಾತನಾಡುತ್ತಾ, “ಈ ಯೋಜನೆಯಿಂದ 1,70,000 ಜನರಿಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ. ಜೊತೆಗೆ, ಕೂಡ್ಲಿಗಿಯ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಶ್ರಮಿಸಿದ ಶಾಸಕ ಶ್ರೀನಿವಾಸ್ ಅವರು ಅತ್ಯಂತ ಕ್ರಿಯಾಶೀಲರಾಗಿದ್ದಾರೆ. ಬರಡು ನೆಲವಾಗಿದ್ದ ಕೂಡ್ಲಿಗಿಯನ್ನು ಹಸಿರು ನೆಲವನ್ನಾಗಿ ಮಾಡಲು ಅವರು ಪಣತೊಟ್ಟು ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ನೇತೃತ್ವದಲ್ಲಿ ಕ್ಷೇತ್ರದ ಅಭಿವೃದ್ಧಿ ವೇಗ ಪಡೆದುಕೊಂಡಿದೆ,” ಎಂದು ಪ್ರಶಂಸಿಸಿದರು.

“ನಮ್ಮದು ನುಡಿದಂತೆ ನಡೆಯುವ ಅಭಿವೃದ್ಧಿ ಪರ ಸರ್ಕಾರ. ಕಳೆದ ಎರಡು ವರ್ಷಗಳಲ್ಲಿ ಕೂಡ್ಲಿಗಿ ಕ್ಷೇತ್ರಕ್ಕೆ ₹1,750 ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಚುನಾವಣಾ ಘೋಷಣೆಯಲ್ಲಿ ನೀಡಿದ್ದ ಐದು ಗ್ಯಾರಂಟಿಗಳನ್ನೂ ಶೇ.100 ರಷ್ಟು ಜಾರಿಗೆ ತಂದಿದ್ದೇವೆ. ಪ್ರತಿ ತಿಂಗಳು ಸರ್ಕಾರದ ಗ್ಯಾರಂಟಿಗಳು ರಾಜ್ಯದ ಜನರ ಮನೆ ಬಾಗಿಲಿಗೆ ತಲುಪುತ್ತಿವೆ,” ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿಗಳು ಮುಂದುವರಿಸಿ, “1.20 ಕೋಟಿ ಕುಟುಂಬಗಳ ಮನೆ ಯಜಮಾನಿಯರಿಗೆ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಹಣ ಹಾಗೂ ಗೃಹಜ್ಯೋತಿ ಸವಲತ್ತು ತಲುಪುತ್ತಿದೆ. ಕೇವಲ ಎರಡು ವರ್ಷಗಳಲ್ಲಿ ನಮ್ಮ ಸರ್ಕಾರ ಒಂದು ಲಕ್ಷ ಕೋಟಿ ರೂಪಾಯಿಗಳನ್ನು ನೇರವಾಗಿ ರಾಜ್ಯದ ಜನರ ಜೇಬಿಗೆ ಹಾಕಿದೆ,” ಎಂದು ಹೇಳಿದರು.

ವಿರೋಧ ಪಕ್ಷದವರನ್ನು ಟೀಕಿಸಿದ ಅವರು, “ನಾವು ನುಡಿದಂತೆ ನಡೆದು ಜನರ ಜೀವನ ಸುಧಾರಿಸುತ್ತಿದ್ದರೆ, ಸುಳ್ಳನ್ನೇ ಮನೆ ದೇವರನ್ನಾಗಿಸಿಕೊಂಡಿರುವ ಬಿಜೆಪಿ ನಾಯಕರು ಜನರಿಗೆ ಸುಳ್ಳುಗಳನ್ನು ಹಂಚುತ್ತಿದ್ದಾರೆ. ಸುಳ್ಳಿನ ಸರದಾರ ಬಿಜೆಪಿ ಈಗ ಸಾರ್ವಜನಿಕವಾಗಿ ಹರಾಜಾಗಿದ್ದು, ಮತಗಳ್ಳತನಕ್ಕೆ ಇಳಿದು ಸಿಕ್ಕಿಬಿದ್ದಿದ್ದಾರೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಬ್ಬು ಬೆಲೆ ಬಿಕ್ಕಟ್ಟಿನ ಕುರಿತು ಮಾತನಾಡಿದ ಅವರು, “FRP ಮತ್ತು MSP ನಿಗದಿಪಡಿಸುವುದು ಕೇಂದ್ರದ ಬಿಜೆಪಿ ಸರ್ಕಾರದ ಹೊಣೆ. ಕಬ್ಬು ಬೆಳೆಗಾರರಿಗೆ ದ್ರೋಹ ಮಾಡಿದವರು ಪ್ರಹ್ಲಾದ್ ಜೋಶಿ. ಆದರೆ, ವಿಜಯೇಂದ್ರ ಅವರು ತಮ್ಮದೇ ಕೇಂದ್ರ ಸರ್ಕಾರದ ದ್ರೋಹವನ್ನು ಮರೆಮಾಚಿ ಬೆಳಗಾವಿಯಲ್ಲಿ ನಾಟಕ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಮಾತ್ರ ಕಬ್ಬು ಬೆಳೆಗಾರರಿಗೆ ಹೆಚ್ಚುವರಿ ಹಣ ನೀಡಿ ಅವರನ್ನು ಕಾಪಾಡುವ ಕೆಲಸ ಮಾಡಿದೆ,” ಎಂದು ಸ್ಪಷ್ಟಪಡಿಸಿದರು.

“ಶಾಸಕ ಶ್ರೀನಿವಾಸ್ ಮತ್ತು ಸಂಸದ ತುಕಾರಾಂ ಇಬ್ಬರೂ ಜನರ ಅಭಿವೃದ್ಧಿಯ ಹೊರತಾಗಿ ಬೇರೆ ಯಾವುದನ್ನೂ ಕೇಳುವವರಲ್ಲ. ಇವರಿಬ್ಬರನ್ನು ಗೆಲ್ಲಿಸಿದ ಕೂಡ್ಲಿಗಿಯ ಜನತೆಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಈ ಇಬ್ಬರು ನಿಮ್ಮ ಆಸ್ತಿಯಂತೆ, ಇವರನ್ನು ಕಾಪಾಡಿಕೊಳ್ಳಿ,” ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕ ಶ್ರೀನಿವಾಸ್, ಸಂಸದ ತುಕಾರಾಂ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *