ಯುವಶಕ್ತಿಯ ಸದ್ಬಳಕೆಗೆ ಕರ್ನಾಟಕ ಸಿದ್ಧ: ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಕೌಶಲ್ಯವೇ ಪ್ರಬಲ ಅಸ್ತ್ರ – ಸಿಎಂ ಸಿದ್ದರಾಮಯ್ಯ

Spread the love

ಬೆಂಗಳೂರು: ‘ಕರ್ನಾಟಕ ಕೌಶಲ್ಯಾಭಿವೃದ್ಧಿ ನೀತಿ 2025-32’ ಉದ್ಘಾಟನೆ; 7 ವರ್ಷಗಳ ಕಾರ್ಯತಂತ್ರಕ್ಕೆ ₹4,432 ಕೋಟಿ ಅನುದಾನ ಮೀಸಲು.

ಯುವಪೀಳಿಗೆಯನ್ನು ಸರಿಯಾದ ಕೌಶಲ್ಯ, ಮನಸ್ಥಿತಿ ಮತ್ತು ಆತ್ಮವಿಶ್ವಾಸದಿಂದ ಸಜ್ಜುಗೊಳಿಸುವ ಮೂಲಕ ಕರ್ನಾಟಕವನ್ನು 2032ರ ವೇಳೆಗೆ ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಜ್ಯವನ್ನಾಗಿಸುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ. ಮಂಗಳವಾರದಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಬೆಂಗಳೂರು ಕೌಶಲ್ಯ ಶೃಂಗಸಭೆ (Bengaluru Skill Summit) 2025” ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕವು ಪ್ರಸ್ತುತ ವಿಶಿಷ್ಟ ಜನಸಂಖ್ಯೆಯ ಹೊರಳು ಹಾದಿಯಲ್ಲಿದೆ. ನಮ್ಮ ಜನಸಂಖ್ಯೆಯ ಶೇ. 60 ಕ್ಕಿಂತ ಹೆಚ್ಚು ಜನರು 35 ವಯೋಮಾನದೊಳಗಿದ್ದಾರೆ. ಮುಂದಿನ ದಶಕದಲ್ಲಿ ಸುಮಾರು 1.2 ಕೋಟಿ ಯುವಕರು ಕಾರ್ಯಪಡೆಯನ್ನು ಪ್ರವೇಶಿಸಲಿದ್ದು, ಈ ಯುವಶಕ್ತಿಯನ್ನು ಸದ್ಬಳಕೆ ಮಾಡಿಕೊಂಡರೆ ಇದು ರಾಜ್ಯಕ್ಕೆ ಅಸಾಧಾರಣ ಅವಕಾಶವಾಗಲಿದೆ. ಉದ್ಯಾನ ನಗರಿ ಎನ್ನುವ ಹೆಗ್ಗಳಿಕೆಯಿಂದ ಸ್ಟಾರ್ಟ್ಅಪ್ ರಾಜಧಾನಿಯಾಗಿ ರೂಪಾಂತರಗೊಂಡಿರುವ ಬೆಂಗಳೂರು ನಗರವು ಈಗ ಭಾರತದ ಕೌಶಲ್ಯ ರಾಜಧಾನಿಯಾಗಿರುವುದು ಹೆಮ್ಮೆಯ ವಿಚಾರ ಎಂದು ಅವರು ತಿಳಿಸಿದರು.

ಕಳೆದ ವರ್ಷದ ಆಯವ್ಯಯದಲ್ಲಿ ಘೋಷಿಸಲಾಗಿದ್ದ ಕರ್ನಾಟಕ ಕೌಶಲ್ಯಾಭಿವೃದ್ಧಿ ನೀತಿ 2025-32 ನ್ನು ಬೆಂಗಳೂರು ಸ್ಕಿಲ್ ಸಮಿಟ್ 2025 ಕಾರ್ಯಕ್ರಮದ ಮೂಲಕ ಇಂದು ಕಾರ್ಯರೂಪಕ್ಕೆ ತರಲಾಗಿದೆ. ಈ 7 ವರ್ಷದ ಮಹತ್ವಾಕಾಂಕ್ಷೆಯ ಕಾರ್ಯತಂತ್ರದ ನೀಲನಕ್ಷೆಗೆ ₹4,432 ಕೋಟಿ ರೂ. ಅನುದಾನದ ಬೆಂಬಲ ನೀಡಲಾಗಿದೆ. 2032ರ ವೇಳೆಗೆ ಸುಮಾರು 30 ಲಕ್ಷ ಯುವಕರಿಗೆ ಕೌಶಲ್ಯ ತರಬೇತಿ ನೀಡುವುದು, ಐಟಿಐಗಳಲ್ಲಿ ಮಹಿಳೆಯರ ಪ್ರವೇಶವನ್ನು ಶೇ. 33 ಕ್ಕೆ ಹೆಚ್ಚಿಸುವುದು ಹಾಗೂ ಐಎಂಸಿಕೆ (IMC-K) ಮೂಲಕ ಜಾಗತಿಕ ಉದ್ಯೋಗಾವಕಾಶಗಳನ್ನು ವೃದ್ಧಿಸುವ ಮಹತ್ತರ ಗುರಿ ಈ ನೀತಿಯ ಮುಖ್ಯ ಉದ್ದೇಶವಾಗಿದೆ. ಕರ್ನಾಟಕವನ್ನು ಕೌಶಲ್ಯಭರಿತ ಹಾಗೂ ಕಾರ್ಮಿಕ ಶಕ್ತಿಯ ಜಾಗತಿಕ ಕೇಂದ್ರವನ್ನಾಗಿ ರೂಪಿಸುವುದು ನಮ್ಮ ದೃಷ್ಟಿಯಾಗಿದೆ ಎಂದು ಸಿಎಂ ಸ್ಪಷ್ಟಪಡಿಸಿದರು. ಎಲೆಕ್ಟ್ರಾನಿಕ್ ಸಿಸ್ಟಮ್ ವಿನ್ಯಾಸ ಮತ್ತು ಉತ್ಪಾದನೆ (ESDMAI), ಏರೋಸ್ಪೇಸ್, ಹಸಿರು ಇಂಧನ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗಕ್ಕೆ ತಯಾರಾಗಿರುವ ಕಾರ್ಮಿಕ ಪಡೆಯನ್ನು ಸಿದ್ಧಪಡಿಸುವತ್ತ ಗಮನ ಕೇಂದ್ರೀಕೃತವಾಗಿದೆ ಎಂದು ಹೇಳಿದರು.

ಕೌಶಲ್ಯಾಭಿವೃದ್ಧಿಯಲ್ಲಿ ಕರ್ನಾಟಕ ಸದಾ ಮುಂಚೂಣಿಯಲ್ಲಿರುವ ರಾಜ್ಯವಾಗಿದೆ. ದೇಶದಲ್ಲಿ ಪ್ರತ್ಯೇಕವಾಗಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯನ್ನು ಪ್ರಾರಂಭಿಸಿದ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಕಳೆದ ಅವಧಿಯಲ್ಲಿ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯ ಮೂಲಕ 5 ಲಕ್ಷ ಯುವಜನರನ್ನು ತಲುಪುವ ಗುರಿ ಹೊಂದಿದ್ದರೂ, ನಾವು ಅದಕ್ಕೂ ಹೆಚ್ಚು ಜನರನ್ನು ತಲುಪಿದ್ದೇವೆ. ಯುವಯುಗ ಯೋಜನೆಯಡಿ ಸುಧಾರಿತ ಡಿಜಿಟಲ್ ಕೌಶಲ್ಯವನ್ನು 1.10 ಲಕ್ಷ ಜನರಿಗೆ ಒದಗಿಸುವ ಮೂಲಕ ಕರ್ನಾಟಕ ಕೈಗಾರಿಕಾ ಕ್ರಾಂತಿಯ 4ನೇ ಹಂತದಲ್ಲಿ (Industry 4.0) ಮುನ್ನಡೆಯುತ್ತಿದೆ.

ಈ ಸಂದರ್ಭದಲ್ಲಿ ರಾಜ್ಯದ ಪ್ರಮುಖ ಸಾಧನೆಗಳನ್ನು ಮುಖ್ಯಮಂತ್ರಿಗಳು ವಿವರಿಸಿದರು. ಕಳೆದ ಎರಡು ವರ್ಷಗಳಲ್ಲಿ 34 ಬೃಹತ್ ಉದ್ಯೋಗ ಮೇಳಗಳನ್ನು ಹಮ್ಮಿಕೊಳ್ಳಲಾಗಿದ್ದು, 1.43 ಲಕ್ಷ ಉದ್ಯೋಕಾಂಕ್ಷಿಗಳು ಭಾಗವಹಿಸಿ 27,123 ಜನರಿಗೆ ಉದ್ಯೋಗಾವಕಾಶ ಲಭಿಸಿದೆ. ಕರ್ನಾಟಕ ಸ್ಕಿಲ್ ಒಲಂಪಿಕ್ಸ್ ಯೋಜನೆಯ ಮೂಲಕ 48 ಪದಕಗಳನ್ನು ಪಡೆದು ಭಾರತದಲ್ಲಿ ರಾಜ್ಯವು ಎರಡನೇ ಸ್ಥಾನದಲ್ಲಿದೆ ಮತ್ತು 4 ಅಂತರರಾಷ್ಟ್ರೀಯ ಪದಕಗಳನ್ನು ಗೆದ್ದಿರುವುದು ಹೆಮ್ಮೆಯ ವಿಷಯವಾಗಿದೆ. ಅಲ್ಲದೆ, ಶಾಲಾ ಮಕ್ಕಳಿಗೆ ‘ನನ್ನ ವೃತ್ತಿ, ನನ್ನ ಆಯ್ಕೆ’ ಕಾರ್ಯಕ್ರಮದಡಿ ಈವರೆಗೆ 35,000 ಮಕ್ಕಳಿಗೆ ತರಬೇತಿ ನೀಡಲಾಗಿದ್ದು, ಈ ವರ್ಷ ಇದನ್ನು 500 ಶಾಲೆಗಳಿಗೆ ವಿಸ್ತರಿಸಿ 2.3 ಲಕ್ಷ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಗುರಿಯಿದೆ ಎಂದು ಅವರು ಹೇಳಿದರು.

ಬೆಂಗಳೂರು ಕೌಶಲ್ಯ ಶೃಂಗಸಭೆಯು ಕರ್ನಾಟಕದ ಕೌಶಲ್ಯ ಪಯಣದಲ್ಲಿ ಒಂದು ಮೈಲಿಗಲ್ಲು ಎಂದು ಅಭಿಪ್ರಾಯಪಟ್ಟ ಮುಖ್ಯಮಂತ್ರಿಗಳು, ರಾಜ್ಯವನ್ನು ವಿಶ್ವದಲ್ಲೇ ಕೌಶಲ್ಯಗಳಿಗೆ ಹೆಸರಾದ ರಾಜ್ಯವನ್ನಾಗಿಸುವುದು ನಮ್ಮ ಅಂತಿಮ ಗುರಿ ಎಂದರು. 2032ರ ಹೊತ್ತಿಗೆ ಕರ್ನಾಟಕವನ್ನು ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಜ್ಯವನ್ನಾಗಿಸುವ ಈ ಗುರಿಯನ್ನು ಸಾಧಿಸಲು ನಮ್ಮ ಕೌಶಲ್ಯಭರಿತ, ಭವಿಷ್ಯಕ್ಕೆ ತಯಾರಾದ ಕಾರ್ಮಿಕಶಕ್ತಿಯೇ ಪ್ರಬಲ ಅಸ್ತ್ರ ಎಂದು ಅವರು ಭಾಷಣವನ್ನು ಮುಕ್ತಾಯಗೊಳಿಸಿದರು.

Leave a Reply

Your email address will not be published. Required fields are marked *