

ಯರಗುಪ್ಪಿ ಪಂಚಾಯಿತಿ ವಿರುದ್ಧ ಮುಳ್ಳಹಳ್ಳಿ ಗ್ರಾಮಸ್ಥರ ಪ್ರತಿಭಟನೆ ಎಚ್ಚರಿಕೆ
ಪೋಟೋ: ತಾಲ್ಲೂಕಿನ ಮುಳ್ಳಹಳ್ಳಿ ಗ್ರಾಮದ 14 ಕುಟುಂಬದ ನೀರಾಶ್ರೀತರು ತಾ ಪಂ ತೆರಳಿ ತಾ ಪಂ ಇಓ ಜಗದೀಶ ಕಮ್ಮಾರ ಅವರಿಗೆ ಹಾಗೂ ಪೋಲಿಸ್ ಠಾಣೆಗೆ ಹಾಗೂ ಯರಗುಪ್ಪಿ ಗ್ರಾಮ ಪಂಚಾಯತಿ ಯವರಿಗೆ ಪ್ರತಿಭಟನೆ ಮಾಡುವದಾಗಿ ಮನವಿ ಸಲ್ಲಿಸಿದರು.
ಕುಂದಗೋಳ: ಕುಂದಗೋಳ ತಾಲ್ಲೂಕಿನ ಮುಳ್ಳಹಳ್ಳಿ ಗ್ರಾಮದ 14 ಕುಟುಂಬಗಳು ಬೆಣ್ಣೆಹಳ್ಳ ಪ್ರವಾಹದಿಂದ ನಿರಾಶ್ರಿತರಾಗಿದ್ದು, ಮನೆ ಮತ್ತು ಜಾಗೆ ನೀಡುವಂತೆ ಆಗ್ರಹಿಸಿ ಯರಗುಪ್ಪಿ ಗ್ರಾಮ ಪಂಚಾಯಿತಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸುಮಾರು 15 ವರ್ಷಗಳ ಹಿಂದೆ ಬೆಣ್ಣೆಹಳ್ಳದ ಪ್ರವಾಹದಿಂದ ಮುಳ್ಳಹಳ್ಳಿ ಗ್ರಾಮವು ಸ್ಥಳಾಂತರಗೊಂಡಿದ್ದು, ಅನೇಕ ಕುಟುಂಬಗಳು ಆಸ್ತಿ ಮತ್ತು ಮನೆಗಳನ್ನು ಕಳೆದುಕೊಂಡಿವೆ. ಅಂದಿನಿಂದಲೂ ಈ ಕುಟುಂಬಗಳು ಗುಡಿಸಲು ಮತ್ತು ತಟ್ಟಿಯ ಮನೆಗಳಲ್ಲಿ ವಾಸಿಸುತ್ತಿವೆ. ಆ ಸಮಯದಲ್ಲಿ ಸರ್ಕಾರ 320 ಮನೆಗಳನ್ನು ನಿರ್ಮಿಸಲು ಮಂಜೂರು ಮಾಡಿತ್ತು. ಇದಕ್ಕಾಗಿ ಪಂಚಾಯಿತಿ ಮೂರು ಪಟ್ಟಿಗಳನ್ನು ತಯಾರಿಸಿತ್ತು.
ರಾಜಕೀಯ ಒತ್ತಡದ ಆರೋಪ
ಗ್ರಾಮಸ್ಥರ ಪ್ರಕಾರ, ಮೊದಲ ಎರಡು ಪಟ್ಟಿಗಳಲ್ಲಿ ಈ 14 ಕುಟುಂಬಗಳ ಹೆಸರುಗಳಿದ್ದವು. ಆದರೆ, ರಾಜಕೀಯ ಮುಖಂಡರ ಒತ್ತಡದಿಂದ ಮೂರನೇ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ತೆಗೆದುಹಾಕಲಾಗಿದೆ. ಇತ್ತೀಚೆಗೆ, 320 ಮನೆಗಳ ಹಕ್ಕುಪತ್ರಗಳನ್ನು ವಿತರಿಸುವ ಪ್ರಕ್ರಿಯೆ ನಡೆದಾಗಲೂ ತಮ್ಮ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದಲ್ಲಿ ಇನ್ನೂ ಮನೆಗಳು ಮತ್ತು ಜಾಗೆ ಖಾಲಿ ಇರುವುದರಿಂದ, ತಮ್ಮ ಕುಟುಂಬಗಳಿಗೂ ಮನೆ ಹಾಗೂ ನಿವೇಶನ ಮಂಜೂರು ಮಾಡಬೇಕು ಎಂದು ಅವರು ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಪ್ರತಿಭಟನೆಯ ಎಚ್ಚರಿಕೆ
ತಮ್ಮ ಬೇಡಿಕೆಗಳನ್ನು ಎಂಟು ದಿನಗಳೊಳಗೆ ಈಡೇರಿಸದೇ ಇದ್ದಲ್ಲಿ, ಇದೇ ಆಗಸ್ಟ್ 21, 2025 ರಂದು ಯರಗುಪ್ಪಿ ಗ್ರಾಮ ಪಂಚಾಯಿತಿಗೆ ಬೀಗ ಹಾಕಿ, ಉಪವಾಸ ಸತ್ಯಾಗ್ರಹ ಮತ್ತು ಪ್ರತಿಭಟನೆ ನಡೆಸುವುದಾಗಿ ಮುಳ್ಳಹಳ್ಳಿ ಗ್ರಾಮದ ನಿರಾಶ್ರಿತರು ಎಚ್ಚರಿಕೆ ನೀಡಿದ್ದಾರೆ.

