‘ಸುರಂಗ ರಸ್ತೆ ಕೇವಲ ದೋಚುವ ತಂತ್ರ’: ರುದ್ರಭೂಮಿ ಕಾರ್ಮಿಕರಿಗೆ ಸಂಬಳ ಕೊಡಲಾಗದ ಸರ್ಕಾರದಿಂದ ಸಾವಿರಾರು ಕೋಟಿ ಯೋಜನೆ ಏಕೆ? – ಛಲವಾದಿ ನಾರಾಯಣಸ್ವಾಮಿ ಕಿಡಿ

Spread the love

ಬೆಂಗಳೂರು: ನಗರದಲ್ಲಿ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಸುರಂಗ ಮಾರ್ಗ (ಟನೆಲ್ ರೋಡ್) ಮಾಡುವ ಮಾತುಗಳ ಬಗ್ಗೆ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಯೋಜನೆ ಕೇವಲ ‘ದೋಚುವ ತಂತ್ರ’ ಅಷ್ಟೇ ಎಂದು ಆರೋಪಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸುರಂಗ ಮಾರ್ಗ ಆಮೇಲೆ ಮಾಡೋಣ. ಆದರೆ, ರುದ್ರಭೂಮಿಯಲ್ಲಿ ಕೆಲಸ ಮಾಡುವ 147 ಜನ ಕಾರ್ಮಿಕರಿಗೆ ಸಂಬಳ ಕೊಡೋ ಯೋಗ್ಯತೆ ಈ ಕಾಂಗ್ರೆಸ್ ಸರ್ಕಾರಕ್ಕೆ ಇದೆಯೇ ಇಲ್ಲವೇ?” ಎಂದು ನೇರವಾಗಿ ಪ್ರಶ್ನಿಸಿದರು. ಸಾವಿರಾರು ಕೋಟಿ ಖರ್ಚಿನಲ್ಲಿ ಸುರಂಗ ಕೊರೆಯುವ ಮಾತನಾಡುವ ಕಾಂಗ್ರೆಸ್ ನಾಯಕರು, 147 ಜನರಿಗೆ ಸಂಬಳ ಕೊಟ್ಟಿಲ್ಲ. ಅನೇಕರಿಗೆ ಸಂಬಳ ಕೊಡದೆ ವಂಚನೆ ಮಾಡಿದ್ದಾರೆ ಮತ್ತು ಅನೇಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಸ್ತುವಾರಿ ಸಚಿವರು ಜಿಲ್ಲೆಗಳಿಗೆ ಹೋಗ್ತಿದ್ದಾರಾ? ರಸ್ತೆ ಗುಂಡಿ ಮುಚ್ಚಲೂ ಆಗುತ್ತಿಲ್ಲ ನಿಮಗೆ ಎಂದು ಹರಿಹಾಯ್ದರು.

‘ಬಿಹಾರ ಚುನಾವಣೆಗೆ ಹಣ ರವಾನೆ?’ ಮತ್ತು ಆಂತರಿಕ ಭಿನ್ನಾಭಿಪ್ರಾಯ:
“ಸುರಂಗ ಎಂಬುದು ದೋಚುವ ತಂತ್ರ ಅಷ್ಟೇ. ಬಿಹಾರ ಚುನಾವಣೆಗೆ ಹಣ ಕಳಿಸಲು ಎಲ್ಲೆಲ್ಲಿ ಸಭೆ ಆಗ್ತಿದೆ. ಡಿನ್ನರ್ ಪಾರ್ಟಿ, ಬ್ರೇಕ್‌ಫಾಸ್ಟ್‌ ಮೀಟಿಂಗ್ ಆಗ್ತಿದೆ” ಎಂದು ನಾರಾಯಣಸ್ವಾಮಿ ಆರೋಪಿಸಿದರು. ಇದೇ ವೇಳೆ, ಕಾಂಗ್ರೆಸ್ ಕಚೇರಿಗೆ ದೊಡ್ಡ ಬೀಗ ಹಾಕಬೇಕು ಎಂದು ರಾಜಣ್ಣ ಹೇಳಿದ್ದನ್ನು ಉಲ್ಲೇಖಿಸಿ, “ಹೇಗಿದ್ದರೂ ಹಾಕೋದು ಹಾಕ್ತೀರಾ, 7 ಲಿವರ್ ನವತಾಳ್ ಬೀಗ ಹಾಕಿ ಯಾರೂ ತೆಗೆಯಲು ಆಗಲ್ಲ” ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್‌ ನಾಯಕರಿಗೆ ಆಪತ್ತು ಬಂದಾಗ ಕಾಂಗ್ರೆಸ್‌ನವರೇ ಮಾತಾಡಲ್ಲ. ಅದೇ ಆರ್‌ಎಸ್‌ಎಸ್‌ಗೆ ಆಪತ್ತು ಬಂದಾಗ ಎಲ್ಲಾ ಅಂಗ ಸಂಘಟನೆಗಳು ಮಾತಾಡ್ತಾವೆ ಎಂದರು.

ದಲಿತ ಸಮುದಾಯದ ಬಗೆಗಿನ ನಿಲುವು:
ಅನೇಕ ದಲಿತ ಸಂಘಟನೆಗಳು ‘ಪ್ಯಾಕೇಜ್‌ಗೆ ಬಿದ್ದಿವೆ’ ಎಂದು ಟೀಕಿಸಿದ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರು ‘ಎಲ್ಲಾ ಪಕ್ಷದಲ್ಲೂ ಇರಿ, ಅಧಿಕಾರ ಪಡೆಯಿರಿ’ ಎಂದು ಹೇಳಿದ್ದರು. ಆದರೆ ಕಾಂಗ್ರೆಸ್ ಹಾಕುವ ‘ಮೂಳೆಗೆ ಜೋತು ಬಿದ್ದು, ಅಲ್ಲೇ ಇದ್ದೀರಿ’. ಕಾಂಗ್ರೆಸ್ ಪಕ್ಷಕ್ಕೆ ಸಂಕಟ ಬಂದಾಗ ಮಾತ್ರ ದಲಿತರು ಬೇಕಾಗುತ್ತಾರೆ ಎಂದು ಆರೋಪಿಸಿದರು.

ಪ್ರಿಯಾಂಕ್ ಖರ್ಗೆ ಮತ್ತು ಇತರ ವಿಷಯಗಳ ಟೀಕೆ:
ಇದೇ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಶೈಕ್ಷಣಿಕ ಅರ್ಹತೆ ಕುರಿತು ಸವಾಲು ಹಾಕಿದ ನಾರಾಯಣಸ್ವಾಮಿ, “ಪ್ರಿಯಾಂಕ್ ಖರ್ಗೆ ಅವರು ಎಸ್.ಎಸ್.ಎಲ್.ಸಿ, ಪಿ.ಯು.ಸಿ ಅಂತ ಚುನಾವಣೆ ನಿಲ್ಲುವಾಗ ಹಾಕಿದ್ದಾರೆ. ನೀವು ಎಸ್.ಎಸ್.ಎಲ್.ಸಿ ಪರೀಕ್ಷೆ ಯಾವಾಗ ಬರೆದಿರಿ? ಪಿ.ಯು.ಸಿ ಪರೀಕ್ಷೆ ಯಾವಾಗ ಬರೆದಿರಿ? ಎಂಬುದನ್ನು ನೀವೇ ಹೇಳಿ” ಎಂದು ಸವಾಲು ಹಾಕಿ, ಅವರನ್ನು ‘ದಡ್ಡ ಶಿಖಾಮಣಿ’ ಎಂದು ಟೀಕಿಸಿದರು.

ಅಸ್ಸಾಂ ಮುಖ್ಯಮಂತ್ರಿ ಪ್ರಿಯಾಂಕ್ ಖರ್ಗೆ ಅವರನ್ನು ‘ಫಸ್ಟ್‌ ಕ್ಲಾಸ್ ಇಡಿಯಟ್’ ಎಂದಿದ್ದ ಹೇಳಿಕೆ ಪ್ರಸ್ತಾಪಿಸಿದ ಅವರು, ಕೆಲ ದಲಿತ ಸಂಘಟನೆಗಳು ಈ ಬಗ್ಗೆ ಮಾತಾಡಿ ಎಂದು ಮನವಿ ಮಾಡಿವೆ ಎಂದರು. ಅಲ್ಲದೆ, ಸ್ಪೀಕರ್ ಯು. ಟಿ. ಖಾದರ್ ಅವರ ಮೇಲೆ ನೂರಾರು ಕೋಟಿ ಲೂಟಿ ಮಾಡಿರುವ ಆರೋಪ ಇದ್ದು, ಮುಖ್ಯಮಂತ್ರಿಗಳು ಕೂಡಲೇ ಹಾಲಿ ಜಡ್ಜ್ ಮೂಲಕ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದರು.

ರಾಹುಲ್ ಗಾಂಧಿಯವರ ಸ್ಪರ್ಧೆ ಮತ್ತು ವಯನಾಡ್ ಕುರಿತು ಮಾತನಾಡಿದ ಅವರು, ವಯನಾಡಿಗೆ ಬನ್ನಿ ಅಂತ ಕರ್ನಾಟಕ ಸರ್ಕಾರ ಪ್ರಚಾರ ಮಾಡಬಾರದು. ಚಿಕ್ಕಮಗಳೂರು, ಉತ್ತರ ಕನ್ನಡ, ಮೈಸೂರಿಗೆ ಬನ್ನಿ ಅಂತ ಟೂರಿಸಂ ಮಾಡಬೇಕು. ವಯನಾಡಿಗೆ ಬನ್ನಿ ಅಂತ ಹೇಳೋದಕ್ಕೆ ಇವರು ಯಾರು? ಇವರದು ‘ಗುಲಾಮಿ ಸರ್ಕಾರ’ ಎಂದು ಹೇಳಲು ಬಯಸುತ್ತೇನೆ ಎಂದು ನುಡಿದರು.

Leave a Reply

Your email address will not be published. Required fields are marked *