ಮೆಟ್ರೋ ದರ ಇಳಿಸಿ; ಸುರಂಗ ರಸ್ತೆ ನಿಲ್ಲಿಸಿ: ಕಾಂಗ್ರೆಸ್ ಯೋಜನೆಯಿಂದ ಸಾರ್ವಜನಿಕರ ದುಡ್ಡು ಪೋಲು – ತೇಜಸ್ವಿ ಸೂರ್ಯ

Spread the love

ಬೆಂಗಳೂರು: ಕಾಂಗ್ರೆಸ್ ಸರ್ಕಾರವು ಪ್ರಸ್ತಾಪಿಸಿರುವ ಟನೆಲ್ ರಸ್ತೆಯ ಯೋಜನೆಯು ‘ಸಾಮಾಜಿಕ ಪಿಡುಗು ನಿವಾರಣೆಗೆ ಇರುವ ₹43 ಸಾವಿರ ಕೋಟಿ’ಯ ಯೋಜನೆ ಎಂದು ಟೀಕಿಸಿದ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು, ಬೆಂಗಳೂರಿನ ಸಾರಿಗೆ ಸಮಸ್ಯೆ ಪರಿಹಾರಕ್ಕೆ ಮೆಟ್ರೋ ದರಗಳನ್ನು ಆದಷ್ಟು ಬೇಗ ಇಳಿಸಿ, ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡುವಂತೆ ಒತ್ತಾಯಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೊಸ 18 ಕಿ.ಮೀ. ಸುರಂಗ ಮಾರ್ಗ ರಚನೆಯಿಂದ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಪರಿಹಾರ ಹೇಗೆ ಸಾಧ್ಯ? ₹43 ಸಾವಿರ ಕೋಟಿ ಖರ್ಚು ಮಾಡುವುದರಿಂದ ಸಾರ್ವಜನಿಕರ ದುಡ್ಡು ಪೋಲಾಗಲಿದೆ. ದುರಂತ ನಿಭಾಯಿಸುವುದು ಹೇಗೆ? ಸಾರಿಗೆ ಸಾಧ್ಯತೆ ಕುರಿತು ಅಧ್ಯಯನ ನಡೆದಿಲ್ಲ; ತಜ್ಞರ ಸಲಹೆಯನ್ನೂ ಕೇಳುತ್ತಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

ಸಾರ್ವಜನಿಕ ಸಾರಿಗೆಗೆ ಆದ್ಯತೆ, ಕಾರುಗಳಿಗೆ ದಂಡ ಅಲ್ಲ:
ಬೆಂಗಳೂರಿನ ಶೇ. 70ರಷ್ಟು ಜನರು ಸಾರ್ವಜನಿಕ ಸಾರಿಗೆಯಲ್ಲಿ ಓಡಾಡುವಂತಾಗಬೇಕು. ಈ ನಿಟ್ಟಿನಲ್ಲಿ ವೈಜ್ಞಾನಿಕ ಪರಿಹಾರಗಳನ್ನು ನಾವು ನೀಡಿದ್ದೇವೆ. ಹೊಸ ಯೋಜನೆಗಳನ್ನು ಆರಂಭಿಸುವ ಮೊದಲು ಬಾಕಿ ಇರುವ ಯೋಜನೆಗಳನ್ನು ಮುಗಿಸಬೇಕು. ಸಾರ್ವಜನಿಕ ಸಾರಿಗೆಗೆ ಆದ್ಯತೆ ಇರಬೇಕು, ಕಾರುಗಳಿಗೆ ಆದ್ಯತೆ ನೀಡುವ ಹಾಗೆ ಇರಬಾರದು ಎಂದು ಹೇಳಿದ್ದಾರೆ. ಸಾರ್ವಜನಿಕ ಸಂಚಾರಕ್ಕೆ ಸಮನ್ವಯತೆಯಿಂದ ಕೆಲಸ ನಡೆಯಬೇಕು. ಕಳೆದ 3 ವರ್ಷಗಳಿಂದ ರಸ್ತೆಯಲ್ಲಿ ನಡೆದಾಡುವ ಜನರ ಗರಿಷ್ಠ ಸಾವು ಸಂಭವಿಸುತ್ತಿದೆ. ಬೆಂಗಳೂರಿನಲ್ಲಿ ಪ್ರತಿದಿನ 15 ರಿಂದ 20 ಜನರು ರಸ್ತೆಯಲ್ಲಿ ನಡೆದುಕೊಂಡು ಹೋಗುವವರು ಸಾಯುತ್ತಿದ್ದಾರೆ. ಬೆಂಗಳೂರಿಗೆ ಸಬರ್ಬನ್ ರೈಲು, ಮೆಟ್ರೋ, ಟ್ರ್ಯಾಮ್‌ಗಳು, ರಿಂಗ್ ರೈಲ್ ಬೇಕಿದೆ ಎಂದು ಅವರು ಗಮನ ಸೆಳೆದರು.

ಮೆಟ್ರೋ ದರ ದುಬಾರಿ, ಕಾರು ಪ್ರಯಾಣ ಅಗ್ಗ:
ಸಂಸದ ಸೂರ್ಯ ಅವರು ಮೆಟ್ರೋ ದರ ಏರಿಕೆಯನ್ನು ತೀವ್ರವಾಗಿ ಟೀಕಿಸಿದರು. “ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸಬೇಕೇ ಅಥವಾ ಅದರಲ್ಲಿ ಹೋಗುವವರಿಗೆ ಬರೆ ಹಾಕಬೇಕೇ? ಕೋಣನಕುಂಟೆಯಿಂದ ಒರಾಯನ್ ಮಾಲ್‌ಗೆ ಒಂದು ಕುಟುಂಬದ 4 ಜನರು ಹೋಗಲು ಒಂದು ಕಡೆಗೆ ₹70 ಟಿಕೆಟ್ ದರ ಇದೆ. 4 ಜನರು ಹೋದಾಗ ₹280 ಖರ್ಚಾಗುತ್ತದೆ. ಸ್ವಂತ ಕಾರಿನಲ್ಲಿ ₹160 ವೆಚ್ಚವಾಗುತ್ತದೆ. ಆದರೆ, 75 ನಿಮಿಷ ಬೇಕು. ಮೆಟ್ರೋ ಪ್ರಯಾಣ ದುಬಾರಿಯಾಗಿದ್ದು, ಆದಷ್ಟು ಬೇಗ ದರ ಇಳಿಸಿ” ಎಂದು ಅವರು ಒತ್ತಾಯಿಸಿದರು.

ಯೋಜನೆಗಳ ವಿಳಂಬ ಮತ್ತು ಪರ್ಯಾಯ ಸಲಹೆ:
ಮೆಟ್ರೋ ಯೋಜನೆಗಳ ವಿಳಂಬ ಕುರಿತು ಆಕ್ರೋಶ ವ್ಯಕ್ತಪಡಿಸಿದ ಅವರು, ಹಳದಿ ಮೆಟ್ರೋ ಮಾರ್ಗ ಆರಂಭವಾದ ಬಳಿಕ ಸಿಲ್ಕ್ ಬೋರ್ಡಿನಲ್ಲಿ ಕಾರುಗಳ ಸಂಚಾರ ದಟ್ಟಣೆ ಶೇ. 37ರಷ್ಟು ಕಡಿಮೆ ಆಗಿದೆ ಎಂದು ಸರ್ಕಾರವೇ ಹೇಳಿದೆ. ಇದನ್ನೇ ಗಮನಿಸಿದರೆ, ನಾವು ಮೆಟ್ರೋ ಹೆಚ್ಚಿಸಬೇಕೇ ಅಥವಾ ಕಾರು ಸಂಚಾರಕ್ಕೆ ಸುರಂಗ ಮಾರ್ಗ ಮಾಡಬೇಕೇ ಎಂದು ಪ್ರಶ್ನಿಸಿದರು. ಸಮಗ್ರ ಸಂಚಾರ ಯೋಜನೆಯಡಿ ಬೆಂಗಳೂರಿಗೆ 300 ಕಿ.ಮೀ ಮೆಟ್ರೋ ಆಗಬೇಕೆಂದಿದೆ. ಇದೇ ₹43 ಸಾವಿರ ಕೋಟಿ ಮೊತ್ತ ಬಳಸಿದರೆ 5 ವರ್ಷಗಳಲ್ಲಿ ಅಂದರೆ, 2031ರೊಳಗೆ 317 ಕಿ.ಮೀ ಮೆಟ್ರೋ ಮಾರ್ಗ ರಚಿಸಲು ಸಾಧ್ಯವಿದೆ. ಆದರೆ, ಸರ್ಕಾರಕ್ಕೆ ಅದರ ಕಡೆ ಆಸಕ್ತಿ ಇಲ್ಲ ಎಂದು ಟೀಕಿಸಿದರು.

ಸದ್ಯ ಬೆಂಗಳೂರಿನಲ್ಲಿ 10 ಲಕ್ಷ ಜನರು ಮೆಟ್ರೋದಲ್ಲಿ ಓಡಾಡುತ್ತಿದ್ದಾರೆ. 45 ಲಕ್ಷ ಜನರು ಬಿಎಂಟಿಸಿಯಲ್ಲಿ ಓಡಾಡುತ್ತಿದ್ದಾರೆ. ಒಟ್ಟು 55 ಲಕ್ಷ ಜನರು ಸಾರ್ವಜನಿಕ ಸಾರಿಗೆಯಲ್ಲಿ ಈಗಾಗಲೇ ಸಂಚರಿಸುತ್ತಾರೆ. ಅವರಿಗಾಗಿ ದರ ಇಳಿಸಿ ಎಂದು ಒತ್ತಾಯಿಸಿದರು.

ಈ ಸಭೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ಮಾಳವಿಕ ಅವಿನಾಶ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಹಾಗೂ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಅವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *