ಹುಬ್ಬಳ್ಳಿಯಲ್ಲಿ ‘ವೋಟ್ ಚೋರ್ ಗದ್ದಿ ಛೋಡ್’ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ: ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್

Spread the love

ಹುಬ್ಬಳ್ಳಿ: ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಪಕ್ಷವು, ನಗರದಲ್ಲಿ ‘ವೋಟ್ ಚೋರ್ ಗದ್ದಿ ಛೋಡ್’ (ಮತಗಳ್ಳತನ ಮಾಡಿದವರು ಅಧಿಕಾರ ಬಿಟ್ಟು ಹೋಗಲಿ) ಎಂಬ ಹೆಸರಿನ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿತು. ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್ ಅವರು ಹಳೇ ಹುಬ್ಬಳ್ಳಿಯ ಬೀರಬಂದ್ ಓಣಿಯ ಮುಖ್ಯ ಸರ್ಕಲ್‌ನಲ್ಲಿ ಈ ಅಭಿಯಾನವನ್ನು ಉದ್ಘಾಟಿಸಿದರು.

​ಈ ವೇಳೆ ಮಾತನಾಡಿದ ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್, ದೇಶದ ವಿವಿಧೆಡೆ ಈ ಅಭಿಯಾನವನ್ನು ನಡೆಸಲಾಗುತ್ತಿದೆ. ಚುನಾವಣಾ ಆಯೋಗದ ಕುತಂತ್ರವನ್ನು ಜನರ ಮುಂದಿಡಲು ನಾವು ಪ್ರಯತ್ನಿಸುತ್ತಿದ್ದೇವೆ. ಕರ್ನಾಟಕದಲ್ಲಿ ಈಗಾಗಲೇ ಒಂದು ಕೋಟಿ ಸಹಿ ಸಂಗ್ರಹ ಮಾಡಲಾಗಿದೆ. ನಮ್ಮ ಈ ಅಭಿಯಾನ ಆದಷ್ಟು ಬೇಗ ದೆಹಲಿ ತಲುಪಲಿದೆ. ಇದರ ಮೂಲಕ ಚುನಾವಣಾ ಆಯೋಗದ ಕುತಂತ್ರವನ್ನು ಬಯಲಿಗೆ ಎಳೆಯುತ್ತೇವೆ ಎಂದು ಅವರು ಹೇಳಿದರು.

​”ಈ ಅಭಿಯಾನವನ್ನು ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಮಾಡುತ್ತಿಲ್ಲ. ನಾವು ಆಧಾರ ಸಹಿತವಾಗಿ ಮತಗಳ್ಳತನವನ್ನು ಬಹಿರಂಗ ಮಾಡುತ್ತಿದ್ದೇವೆ. ಪ್ರಜಾಪ್ರಭುತ್ವದ ಉಳಿಗಾಗಿ ಈ ಮಹತ್ವದ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ” ಎಂದು ಮಯೂರ ಜಯಕುಮಾರ್ ಅವರು ಹುಬ್ಬಳ್ಳಿಯಲ್ಲಿ ಹೇಳಿಕೆ ನೀಡಿದರು.

​ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಪ್ರಸಾದ್ ಅಬ್ಬಯ್ಯ ಅವರು ಚುನಾವಣಾ ಆಯೋಗದ ವಿರುದ್ಧ ಕಿಡಿ ಕಾರಿದರು. “ನನ್ನ ಕ್ಷೇತ್ರದಲ್ಲಿಯೂ ಮತಗಳ್ಳತನವಾಗಿದೆ. ದೇಶದ ವಿವಿಧ ಕ್ಷೇತ್ರಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಪ್ರಜಾಪ್ರಭುತ್ವದ ವಿರೋಧಿ ಕೃತ್ಯವಾದ ಇದರ ವಿರುದ್ಧ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ” ಎಂದು ಅವರು ಅಭಿಯಾನದ ವೇಳೆ ತಿಳಿಸಿದರು.

ಈ ವೇಳೆ ಮಾಜಿ‌ ಸಚಿವರಾದ ಶ್ರೀ ಎ.ಎಂ.ಹಿಂಡಸಗೇರಿ, ಕಾಂಗ್ರೆಸ್ ಮುಖಂಡರಾದ ಶ್ರೀ ಆನಂದ ಗಡ್ಡದೇವರಮಠ, ವಾಕರಸಾ ಸಂಸ್ಥೆಮಾಜಿ ಅಧ್ಯಕ್ಷರಾದ ಶ್ರೀ ಸದಾನಂದ ವಿ. ಡಂಗನವರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಅಲ್ತಾಫಹುಸೇನ ಹಳ್ಳೂರ ಅವರು ಸೇರಿದಂತೆ ಕಾಂಗ್ರೆಸ್ ಪಾಲಿಕೆ ಸದಸ್ಯರು, ವಾರ್ಡ್ ಕಾಂಗ್ರೆಸ್ ಅಧ್ಯಕ್ಷರು, ಸ್ಥಳೀಯ ಮುಖಂಡರು, ಕಾರ್ಯಕರ್ತರು ಸೇರಿದಂತೆ ಮೊದಲಾದ ಗಣ್ಯರು ಇದ್ದರು.

Leave a Reply

Your email address will not be published. Required fields are marked *